ಮುಂಬೈ ಸ್ಲಂ: ಅಡುಗೆಗೆ, ಕುಡಿಯಲು ಮಿನರಲ್ ವಾಟರ್!

Update: 2016-08-14 08:20 GMT

ಮುಂಬೈ, ಆ.14: ವಿಶ್ವವಿಖ್ಯಾತ ಅಂಧೇರಿ ಕೊಳಗೇರಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಕೆಟ್ಟ ಕಾರಣಗಳಿಗಾಗಿ ಅಲ್ಲ. ಹಲವು ಪೈಪ್‌ಗಳನ್ನು ಹೊಂದಿರುವ ಇಲ್ಲಿನ ತಗಡು ಶೀಟಿನ ಗುಡಿಸಲೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಅದೇನು ಗೊತ್ತೇ? ನೆರೆಯ ಧಂಗರವಾಡಿ ಕೊಳಗೇರಿಯ ಮಂದಿಗೆ ಅಡುಗೆ ಹಾಗೂ ಕುಡಿಯುವ ಉದ್ದೇಶಕ್ಕೆ ಇಲ್ಲಿಂದ ಮಿನರಲ್ ವಾಟರ್ ಪೂರೈಸುವ ಪ್ರಾಯೋಗಿಕ ಯೋಜನೆ ಮೂಲಕ ಅಂಧೇರಿ ಇದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಶಾಸಕ ಅಮಿತ್ ಸತಾಂ ಹಾಗೂ ತಾಂತ್ರಿಕ ತಜ್ಞರ ತಂಡ ಈ ವಿಶಿಷ್ಟ ಮಾದರಿಯನ್ನು ಕಂಡುಹಿಡಿದಿದ್ದು, ಇದರ ಅನ್ವಯ ಕಾನೂನುಬದ್ಧವಾಗಿ ಕೊಳಗೇರಿಯ ಕಾಲೋನಿಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗುವುದು. ಇದು ಬೇರೆ ಪ್ರದೇಶಗಳಿಗೂ ಮಾದರಿಯಾಗುವ ನಿರೀಕ್ಷೆ ಇದೆ.
"ನಾವು ಇದಕ್ಕಾಗಿ ಹೊಸ ಕೊಳವೆಬಾವಿ ಕೊರೆಯಲು ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಅನುಮತಿ ಕೋರಿದ್ದೇವೆ. ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ. ಆದರೆ ಕೊಳವೆಬಾವಿಯ ನೀರು ಕಲುಷಿತಗೊಂಡಿರುವುದರಿಂದ ನಾವು ರಿವರ್ಸ್ ಓಸ್ಮೋಸಿಸ್ ಘಟಕವನ್ನು ಮತ್ತು ಯುವಿ ಘಟಕವನ್ನು ಪಕ್ಕದಲ್ಲೇ ಅಳವಡಿಸಿದ್ದೇವೆ. ಇಲ್ಲಿಂದ ಪೈಪ್ ಮೂಲಕ ಕೊಳಗೇರಿಗಳಿಗೆ ಸರಬರಾಜು ಮಾಡಲಾಗುತ್ತದೆ" ಎಂದು ಶಾಸಕರು ವಿವರಿಸಿದ್ದಾರೆ.
ಈ ಬಗೆಯ ತಂತ್ರಜ್ಞಾನವನ್ನು ಬಾಟಲಿ ನೀರಿನ ಘಟಕಗಳು ಬಳಕೆ ಮಾಡುತ್ತವೆ. ಇದೀಗ ಕೊಳಗೇರಿ ನಿವಾಸಿಗಳು ಅಕ್ಷರಶಃ ಮಿನರಲ್ ವಾಟರ್ ಅನ್ನು ಪೈಪ್ ಮೂಲಕ ಪಡೆಯುತ್ತಾರೆ ಎಂದು ಹೇಳಿದ್ದಾರೆ. ಈ ಪ್ರಾಯೋಗಿಕ ಯೋಜನೆಯಲ್ಲಿ ಸುಮಾರು ಐದು ಸಾವಿರ ಮಂದಿಗೆ ಈ ಸೌಲಭ್ಯ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News