ವ್ಯಕ್ತಿಯ ಜೀವಕ್ಕೆ ಕುತ್ತು ತಂದ ದಿಲ್ಲಿಯ ಭದ್ರತಾ ವ್ಯವಸ್ಥೆ

Update: 2016-08-14 08:43 GMT

ಹೊಸದಿಲ್ಲಿ, ಆ.14: ಸ್ವಾತಂತ್ರೋತ್ಸವದ ಪೂರ್ವತಯಾರಿಗಾಗಿ ಏರ್ಪಡಿಸಲಾಗಿದ್ದ ಭದ್ರತಾ ವ್ಯವಸ್ಥೆ ಓರ್ವ ವ್ಯಕ್ತಿಯ ಜೀವಕ್ಕೆ ಕುತ್ತು ತಂದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಪೂರ್ವ ದಿಲ್ಲಿಯ ಗಾಂಧಿನಗರದ ನಿವಾಸಿ 50ರ ಹರೆಯದ ಕೈಲಾಶ್ ಚಂದ್ರರಿಗೆ ಬೆಳಗ್ಗೆ 7:30ಕ್ಕೆ ಹೃದಯಾಘಾತವಾಗಿದೆ. ಕೈಲಾಶ್‌ರ ಪುತ್ರ ತಂದೆಯನ್ನು ಆಟೋರಿಕ್ಷಾದಲ್ಲಿ ಕುಳ್ಳಿರಿಸಿ ಮನೆಯಿಂದ 6 ಕಿ.ಮೀ.ದೂರದಲ್ಲಿರುವ ಲೇಡಿ ಇರ್ವಿನ್ ಆಸ್ಪತ್ರೆಯತ್ತ ಹೊರಟರು. ಕೇವಲ 10 ನಿಮಿಷ ಆಸ್ಪತ್ರೆಗೆ ತಲುಪಬೇಕಾಗಿದ್ದ ಕೈಲಾಶ್ ಪ್ರಯಾಣಿಸುತ್ತಿದ್ದ ರಿಕ್ಷಾ ಆಸ್ಪತ್ರೆ ತಲುಪಲು ಒಂದೂವರೆ ಗಂಟೆ ಹಿಡಿಯಿತು. ಅದಾಗಲೇ ಕೈಲಾಶ್ ಪ್ರಾಣ ಹಾರಿಹೋಗಿತ್ತು. ಈ ದಾರುಣ ಘಟನೆಗೆ ಸ್ವಾತಂತ್ರೋತ್ಸವಕ್ಕಾಗಿ ನಗರದ ಕೆಲವೆಡೆ ಮಾರ್ಗ ಬದಲಾವಣೆ ಮಾಡಿರುವುದೇ ಕಾರಣವಾಗಿತ್ತು.

‘‘ನನ್ನ ತಂದೆಯನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾಗಿದೆ. ನಮಗೆ ನೇರ ಮಾರ್ಗದಲ್ಲಿ ಹೋಗಲು ಬಿಡಿ ಎಂದು ಪೊಲೀಸರಲ್ಲಿ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ವಾತಂತ್ರ ದಿನಾಚರಣೆಯ ಪಥ ಸಂಚಲನದ ಪೂರ್ವ ತಯಾರಿ ನಡೆಯುತ್ತಿರುವ ಕಾರಣ ವಾಹನಗಳಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದರು. ದಿಲ್ಲಿ ಪೊಲೀಸರು ಹಾಗೂ ಅವರ ಭದ್ರತಾ ವ್ಯವಸ್ಥೆಗಳಿಂದಾಗಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಭದ್ರತೆ ಮನುಷ್ಯನ ರಕ್ಷಣೆಗಾಗಿ ಇರುತ್ತದೆ. ನಾನು ಇಂತಹ ಅಮಾನವೀಯ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ’’ ಎಂದು ಮೃತ ಕೈಲಾಶ್‌ರ ಪುತ್ರ ಅರವಿಂದ್ ಕುಮಾರ್ ನೋವು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News