ರಿಯೋ ಒಲಿಂಪಿಕ್ಸ್ ನ ಟೆನಿಸ್‌ ಮಿಶ್ರ ಡಬಲ್ಸ್‌: ಸಾನಿಯಾ-ಬೋಪಣ್ಣಗೆ ಸೋಲು; ಭಾರತಕ್ಕೆ ಕೈ ತಪ್ಪಿದ ಕಂಚು

Update: 2016-08-14 18:13 GMT

  ರಿಯೋ ಡಿ ಜನೈರೊ, ಆ.14: ಭಾರತದ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ರಿಯೋ ಒಲಿಂಪಿಕ್ಸ್‌ನ ಮಿಶ್ರ ಡಬಲ್ಸ್‌ನ ಪ್ಲೇ-ಆಫ್ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ಸೋಲುವುದರೊಂದಿಗೆ ಕಂಚಿನ ಪದಕ ವಂಚಿತರಾದರು.

ರವಿವಾರ ಇಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಾನಿಯಾ-ಬೋಪಣ್ಣ ಝೆಕ್ ಗಣರಾಜ್ಯದ ಲೂಸಿ ಹೃಡೆಕಾ ಹಾಗೂ ರಾಡೆಕ್ ಸ್ಟೆಪ್ನೆಕ್ ವಿರುದ್ಧ 1-6, 5-7 ಸೆಟ್‌ಗಳ ಅಂತರದಿಂದ ಸೋತು ಭಾರೀ ನಿರಾಸೆಗೊಳಿಸಿದರು.

ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಸಾನಿಯಾ-ಬೋಪಣ್ಣ ಅಮೆರಿಕದ ವೀನಸ್ ವಿಲಿಯಮ್ಸ್ ಹಾಗೂ ರಾಜೀವ್ ರಾಮ್ ವಿರುದ್ಧ 3 ಸೆಟ್‌ಗಳ ಅಂತರದಿಂದ ಸೋಲುವುದರೊಂದಿಗೆ ಫೈನಲ್‌ಗೆ ತಲುಪುವ ಅವಕಾಶ ವಂಚಿತರಾಗಿದ್ದರು.

ಸಾನಿಯಾ-ಬೋಪಣ್ಣ ಮೊದಲ ಸೆಟ್‌ನ್ನು 6-2 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭವನ್ನೇ ಪಡೆದಿದ್ದರು. ಆದರೆ, ತಿರುಗೇಟು ನೀಡಿದ ವೀನಸ್ ಹಾಗೂ ರಾಮ್ ಉಳಿದೆರಡು ಸೆಟ್‌ಗಳನ್ನು 6-2, 10-3 ಅಂತರದಿಂದ ಗೆದ್ದುಕೊಂಡಿತು.

 ಫೈನಲ್‌ಗೆ ತಲುಪಿರುವ ಅಮೆರಿಕದ ಜೋಡಿ ಕನಿಷ್ಠ ಬೆಳ್ಳಿ ಪದಕವನ್ನು ದೃಢಪಡಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಟೆನಿಸ್‌ನಲ್ಲಿ ಈ ತನಕ ಏಕೈಕ ಪದಕ ಜಯಿಸಿದೆ. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

 ವೀನಸ್‌ಗೆ ಐತಿಹಾಸಿಕ 5ನೆ ಪದಕ: ಫೈನಲ್‌ಗೆ ತಲುಪಿರುವ ಅಮೆರಿಕದ ಹಿರಿಯ ಆಟಗಾರ್ತಿ ಐದು ಒಲಿಂಪಿಕ್ಸ್ ಪದಕ ಜಯಿಸಿದ ಎರಡನೆ ಟೆನಿಸ್ ಆಟಗಾರ್ತಿ ಎಂಬ ಇತಿಹಾಸ ಬರೆದರು.

ಇದೀಗ ವೀನಸ್ ಒಲಿಂಪಿಕ್ಸ್‌ನಲ್ಲಿ 5 ಚಿನ್ನದ ಪದಕ ಪಡೆದ ಮೊದಲ ಟೆನಿಸ್ ಆಟಗಾರ್ತಿ ಎನಿಸಿಕೊಳ್ಳಲು ಬಯಸಿದ್ದು, ವೀನಸ್ ಸಹೋದರಿ ಸೆರೆನಾ ಒಟ್ಟು 4 ಚಿನ್ನದ ಪದಕ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News