×
Ad

ಈಶಾನ್ಯದ 10 ಸ್ವಾತಂತ್ರವೀರರಿಗೆ ಇಂದು ಕೇಂದ್ರದಿಂದ ಗೌರವಾರ್ಪಣೆ

Update: 2016-08-14 23:57 IST

ಹೊಸದಿಲ್ಲಿ, ಆ.14: ದೇಶದ ಇತರ ಭಾಗಕ್ಕೆ ಅಷ್ಟೇನೂ ಪರಿಚಿತರಲ್ಲದ, ಮೂವರು ಮಹಿಳೆಯರು ಸೇರಿದಂತೆ ಈಶಾನ್ಯ ಭಾರತದ 10 ಸ್ವಾತಂತ್ರ ಹೋರಾಟಗಾರರನ್ನು ಕೇಂದ್ರವು 70ನೆ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಗೌರವಿಸಲಿದೆ.

 ಮಹಾತ್ಮಾ ಗಾಂಧಿಯವರ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ಸಂದರ್ಭದಲ್ಲಿ ಅಸ್ಸಾಮಿನ ಈಗಿನ ಬಿಶ್ವನಾಥ ಜಿಲ್ಲೆಯ ಗೋಹಪುರದ ಬೋರಂಗಬಾರಿ ಎಂಬಲ್ಲಿ ನಿರಾಯುಧ ಮಹಿಳೆಯರ ಗುಂಪಿನ ನೇತೃತ್ವ ವಹಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ತೆರಳುತ್ತಿದ್ದ ಕನಕಲತಾ ಬರುವಾ(17) ಳನ್ನು ಬ್ರಿಟಿಷ್‌ರು ಗುಂಡಿಟ್ಟು ಕೊಂದಿದ್ದರು. ಅದೇ ದಿನ ಸುಮಾರು 150 ಕಿ.ಮೀ. ದೂರದ ನಾಗಾಂವ್ ಜಿಲ್ಲೆಯ ಬರ್ಹಾಮಪುರದಲ್ಲಿ ಇದೇ ಕಾರಣಕ್ಕಾಗಿ ಭೋಗೇಶ್ವರಿ ಫುಂಕನಾನಿ(57)ಯನ್ನು ಬ್ರಿಟಿಷ್ ಪೊಲೀಸರು ಕೊಂದಿದ್ದರು.
ಕೇಂದ್ರವು ಹಮ್ಮಿಕೊಂಡಿರುವ ಈ ‘ಮರೆತುಹೋದ ನಾಯಕರು’ ಕಾರ್ಯಕ್ರಮದಡಿ ಮಣಿಪುರದ ನಾಗಾ ಆಧ್ಯಾತ್ಮಿಕ ಹಾಗೂ ರಾಜಕೀಯ ನಾಯಕಿ ರಾಣಿ ಗಾಯಿದಿನ್ಲೂ ಅವರಿಗೂ ಗೌರವಗಳನ್ನು ಸಲ್ಲಿಸಲಾಗುವುದು. ರಾಣಿಮಾ ಎಂದೇ ಹೆಸರಾಗಿದ್ದ ಅವರು 1930ರ ದಶಕದಲ್ಲಿ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದು, ಇದು ಶೀಘ್ರವೇ ಮಣಿಪುರ ಮತ್ತು ನಾಗಾಲ್ಯಾಂಡ್‌ಗಳಿಂದ ಬ್ರಿಟಿಷ್‌ರನ್ನು ಬೇರು ಸಹಿತ ಕಿತ್ತುಹಾಕುವ ಹೋರಾಟವಾಗಿ ಮಾರ್ಪಟ್ಟಿತ್ತು. 14ವರ್ಷಗಳ ಕಾಲ ಬಂಧನದಲ್ಲಿದ್ದ ಅವರು 1947ರಲ್ಲಿ ಭಾರತಕ್ಕೆ ಸ್ವಾತಂತ್ರ ದೊರೆತಾಗ ಜೈಲಿನಿಂದ ಹೊರಬಂದಿದ್ದರು.
ಅಸ್ಸಾಮಿನ ಇನ್ನೋರ್ವ ಸ್ವಾತಂತ್ರ ಹೋರಾಟಗಾರ ಕುಶಲ್ ಕೊನ್ವಾರ್ ಅವರು 1942ರಲ್ಲಿ ಗೋಲಘಾಟ್ ಜಿಲ್ಲೆಯಲ್ಲಿ ಮಿಲಿಟರಿ ರೈಲೊಂದನ್ನು ಹಳಿ ತಪ್ಪಿಸಿದ್ದಕ್ಕಾಗಿ ಬ್ರಿಟಿಷ್‌ರಿಂದ ಗಲ್ಲಿಗೇರಿಸಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News