×
Ad

ಉನಾದಲ್ಲಿ ಮತ್ತೆ ದಲಿತರ ಮೇಲೆ ಗೋರಕ್ಷಕರ ದಾಳಿ

Update: 2016-08-15 12:30 IST

ಉನಾ,ಆ.15 : ಉನಾದಲ್ಲಿ ಅಂತ್ಯಗೊಳ್ಳಲಿರುವ ದಲಿತ ಆಸ್ಮಿತಾ ಯಾತ್ರೆಯ ಹತ್ತನೇ ದಿನವಾದ ರವಿವಾರದಂದು ಕನಿಷ್ಠ ನಾಲ್ಕು ಗ್ರಾಮಗಳಲ್ಲಿ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ದಲಿತರ ಮೇಲೆ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗಿವೆ.

ಪ್ರತ್ಯಕ್ಷದರ್ಶಿಗಳ ಪ್ರಕಾರಗೋರಕ್ಷಕರ ವಿವಿಧ ಗುಂಪುಗಳು ಸಂತೇರಾ ಗ್ರಾಮದಲ್ಲಿ ದಲಿತರು ಪ್ರಯಾಣಿಸುತ್ತಿದ್ದ ಮಹೀಂದ್ರ ಬೊಲೆರೋ ವಾಹನಕ್ಕೆ ಕಲ್ಲು ತೂರಾಟ ನಡೆಸಿ ಅವರು ವಾಹನ ಬಿಟ್ಟು ಓಡುವಂತೆ ಮಾಡಿದ್ದಾರೆ. ಗಾಯಗೊಂಡಿರುವ ಹಲವು ದಲಿತರು ಉನಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಂತಹುದೇ ಘಟನೆಗಳು ಖಂಬ ಹಾಗೂ ಬೊಡಿದಾ ಗ್ರಾಮಗಳಲ್ಲೂ ವರದಿಯಾಗಿವೆ. ತಂಗಧ್ ಗ್ರಾಮದಲ್ಲಿ ಸುಮಾರು ಹತ್ತು ಮಂದಿ ದಲಿತರ ಮೇಲೆ ದಾಳಿ ನಡೆಸಲಾಗಿದ್ದು ಎಂಟು ಮಂದಿ ಪ್ರಾಣಭಯದಿಂದ ಓಡಿ ಹೋದರೆ ಒಬ್ಬರು ನಾಪತ್ತೆಯಾಗಿದ್ದಾರೆ. ಬೊಡಿದರ್ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಹಲವರಿಗೆ ತಲೆಗೆ ಗಂಭೀರ ಗಾಯಗಳಾಗಿವೆ. ಮೂರನೆಯ ಘಟನೆ ನಡೆದಖಂಬ ಎಂಬ ಗ್ರಾಮದಲ್ಲಿಉನಾಗೆ ತೆರಳುತ್ತಿದ್ದ 40 ರಿಂದ 50 ದಲಿತರ ಮೇಲೆ ಹಲ್ಲೆ ನಡೆಸಲಾಗಿದೆ. ಅವರಲ್ಲಿಎಂಟು ಮಂದಿ ಮಕ್ಕಳೂ ಸೇರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು ಎಫ್ ಐ ಆರ್ ದಾಖಲಿಸಲಾಗುವುದು ಎಂದು ಹೇಳಿದ್ದರೂ ತಮಗೆ ಅದರ ಪ್ರತಿಯನ್ನು ನೀಡಲಾಗಿಲ್ಲ ಎಂದು ಗಾಯಾಳುಗಳು ಹೇಳಿದ್ದಾರೆ.

ಸಂತೇರಾದಲ್ಲಿ ರಾಜುಭಾಯ ಕುಂಜಾಭಾಯಿ ಪರ್ಮಾರ್ ಎಂಬ ದಲಿತನನ್ನು ಆತನ ಮನೆಯೊಳಗೇ ಕುಟುಂಬದೊಂದಿಗೆ ಬಂದಿಯಾಗಿರಿಸಲಾಗಿದ್ದು ಆತನ ಹೆಂಡತಿ ದಲಿತ ಆಸ್ಮಿತ ರ್ಯಾಲಿ ಆಯೋಜಕರಿಗೆ ಕರೆ ಮಾಡಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ ತಮ್ಮ ಕುಟುಂಬಕ್ಕೆಬೆದರಿಕೆಯೊಡ್ಡಲಾಗಿದೆಯೆಂದು ತಿಳಿಸಿದ್ದರು.

ಉನಾ ಘಟನೆಯ 20 ಆರೋಪಿಗಳು ಇದೇ ಗ್ರಾಮದವರಾಗಿದ್ದು ಸಂತೇರಾದಲ್ಲಿ ಹೆಚ್ಚಿನವರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ.

ಆಗಸ್ಟ್ 14 ರಂದು ಗೋರಕ್ಷಕರು ರ್ಯಾಲಿ ಹಾದು ಹೋಗುವ ದಾರಿಯನ್ನು ಬಂದ್ ಮಾಡಿದ್ದರಲ್ಲದೆ ರ್ಯಾಲಿಯ ಕೊನೆಯ ಹಂತದ ಮಾರ್ಗ ಬದಲಾಯಿಸುವುದು ಅನಿವಾರ್ಯವಾಗಿಸಿದ್ದರು.

ಇಂದು ಉನಾದಲ್ಲಿ ನಡೆಯುವ ಸಮಾವೇಶದ ಸಮಯವನ್ನು ಉನಾ ಪೊಲೀಸರು ಕಡಿತಗೊಳಿಸಿದ್ದಾರೆಂದು ಹೇಳಲಾಗುತ್ತಿದೆ. ಉನಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಕ್ಷಾ ಕ್ರಮಗಳನ್ನು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News