×
Ad

ಸಂಘ ಪರಿವಾರ, ಖಾಸಗೀಕರಣದಿಂದ ದೇಶವನ್ನು ರಕ್ಷಿಸುವೆ

Update: 2016-08-15 12:43 IST

ಮಾನ್ಯ ದೇಶ ಬಾಂಧವರೇ,  ಇಂದು ನಮ್ಮ ದೇಶವು 70ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಿನಲ್ಲಿದೆ. ಅಂದು ನಾವು ಪಡೆದ ಸ್ವಾತಂತ್ರ್ಯಕ್ಕೆ ಇಂದು ಅರ್ಥವಂತಿಕೆ ಇಲ್ಲದಂತಾಗಿದೆ.  ಅಖಂಡ ಛಾರತದ ಪ್ರಜೆಗಳಾಗಿ  ಪ್ರಗತಿಯ ಪಥದಲ್ಲಿ ನಡೆಯಬೇಕಾದ ನಾವು ಜಾತಿ, ಧರ್ಮ, ವರ್ಗಗಳ ಆಧಾರದ ಮೇಲೆ ನಮ್ಮ ನಡುವೆ ಗೋಡೆಗಳನ್ನು ಕಟ್ಟಿಕೊಂಡು ದೇಶವನ್ನು ಮಾನಸಿಕವಾಗಿ ಸಾಂಸ್ಕೃತಿಕವಾಗಿ ಛಿದ್ರಗೊಳಿಸುತ್ತಿದ್ದೇವೆ. 

ಜಾತ್ಯತೀತವಾಗಿ ರಾಷ್ಟ್ರವನ್ನು ಮುನ್ನಡೆಸಬೇಕಾದ ಸರ್ಕಾರಗಳು ಮತೀಯವಾದಿ ಸಂಘ ಪರಿವಾರಗಳ ಕೈಗೊಂಬೆಗಳಾಗುತ್ತಿವೆ. ಮತೀಯವಾದಿಗಳು ರಾಜಕೀಯ ಪ್ರವೇಶ ಮಾಡಿ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅಡಗಿಸಲು ಪಣ ತೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಕಂಟಕಪ್ರಾಯವಾಗಿದೆ. ತಮ್ಮ ತಮ್ಮ ಸಂಸ್ಕೃತಿ ಧರ್ಮದ ರಕ್ಷಣೆಗಾಗಿ ಸಂಘಗಳನ್ನು ಸ್ಥಾಪಿಸಲು ಸಂವಿಧಾನ ಅವಕಾಶ ನೀಡಿದೆಯೇ ಹೊರತು ಅನ್ಯ ಸಮುದಾಯಗಳ ಮೇಲೆ ಸಾಂಸ್ಕೃತಿಕ ಆಕ್ರಮಣ ನಡೆಸುವುದಕ್ಕಾಗಿ ಅಲ್ಲ. ಆದ್ದರಿಂದ ಸರ್ಕಾರಗಳನ್ನೇ ನಿಯಂತ್ರಿಸಿ ಮತೀಯ ಕಲಹಗಳಿಗೆ ಬೀಜ ಬಿತ್ತುವ ಸಂಘ ಪರಿವಾರಗಳನ್ನು ನಿಷೇಧಿಸಬೇಕೆಂಬುದು ನನ್ನ ಮಹದಾಶಯವಾಗಿದೆ. ಧಾರ್ಮಿಕತೆ ರಾಜಕಾರಣ ಒಂದಾಗಿರುವ ಈ ಸಂದರ್ಭದಲ್ಲಿ ಎಲ್ಲ ಸಮುದಾಯಗಳ ಸಂಸ್ಕೃತಿಯ ರಕ್ಷಣೆ ಮಾಡಬೇಕಾಗಿದೆ. ಹಾಗೆಯೇ ಈ ದೇಶದ ಶಿಕ್ಷಣ ಪದ್ಧತಿ,  ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ಖಾಸಗೀಕರಣದ ಹಿಡಿತದಿಂದ ಪಾರಾಗಿ ನಮ್ಮದೇ ಆದ ದೇಸೀ ಆರ್ಥಿಕ ನೀತಿಗಳನ್ನು ರೂಪಿಸಿ, ನಮ್ಮ ದೇಶವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯಲು ತಾವೆಲ್ಲರೂ ಕೊಡುಗೆಯನ್ನು ನೀಡಬೇಕೆಂದು ಆಶಿಸುತ್ತೇನೆ. ಇನ್ನು ಮುಂದೆ ನಮ್ಮ ಘೋಷಣೆ ಜೈಹಿಂದ್ ಮಾತ್ರ ಆಗದಿರಲಿ. ಭಾರತಕ್ಕೆ ಉತ್ತಮ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಅವರನ್ನು ನೆನೆಯುವಂತೆ ಜೈ ಭೀಮ್ ಎಂದು ಬದಲಾಗಲಿ ಎಂದು ಆಶಿಸುತ್ತೇನೆ. 

Writer - ಕಿಶೋರ್ ಕೆ.

contributor

Editor - ಕಿಶೋರ್ ಕೆ.

contributor

Similar News