ಇಸ್ರೇಲಿ ಜೈಲು ಸಮಾಧಿಯಂತ್ತಿತ್ತು !
ಹೆಬ್ರಾನ್,ಆ.15 : ಇಸ್ರೇಲಿ ನಾಗರಿಕನೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪಕ್ಕೊಳಗಾಗಿ 17 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುತ್ತಿರುವ ತನ್ನ ಸಹೋದರನನ್ನು ಕಾಣಲು ಜೈಲಿಗೆ ಹೋದಾಗ ಆತನಿಗಾಗಿ ಸಿಮ್ ಕಾರ್ಡ್ ಒಂದನ್ನು ರಹಸ್ಯವಾಗಿ ತೆಗೆದುಕೊಂಡು ಹೋದ ತಪ್ಪಿಗಾಗಿಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ ಕಳೆದ ವಾರ ಬಿಡುಗಡೆಯಾಗಿರುವ ಹೆಬ್ರಾನ್ ನ 28 ವರ್ಷದ ಫೆಲೆಸ್ತೀನಿ ಮಹಿಳೆ ಅಮಲ್ ಅಲ್-ಸಾದಾ ತಾನಿದ್ದ ಇಸ್ರೇಲಿ ಜೈಲು ಸಮಾಧಿಯಂತಿತ್ತು ಎಂದು ಬಣ್ಣಿಸಿದ್ದಾಳೆ.
‘‘ಬಂಧನದಲ್ಲಿ ಹಗಲು ರಾತ್ರಿಗಳ ವ್ಯತ್ಯಾಸವೇತಿಳಿಯುತ್ತಿರಲಿಲ್ಲ. ಅದು ಸಮಾಧಿಯೊಳಗಡೆ ಇದ್ದಂತಿತ್ತು. ಅಲ್ಲಿನ ಶೌಚಗೃಹಕ್ಕೆ ಬಾಗಿಲಿರದೇ ಇದ್ದುದರಿಂದ ನಾನು ಎರಡು ವಾರಗಳ ಕಾಲ ಸ್ನಾನ ಮಾಡದೇ ಇದ್ದಿದ್ದುಂಟು,’’ ಎಂದು ಅಲ್-ಜಝೀರಾಗೆ ನೀಡಿದ ಸಂದರ್ಶನವೊಂದರಲ್ಲಿ ಸಾದಾ ಹೇಳಿದ್ದಾಳೆ. ಡಯಾಬಿಟೀಸ್ ರೋಗಿಯಾಗಿರುವ ಆಕೆ ದಿನಕ್ಕೆ ಮೂರು ಬಾರಿ ಕೈಗಳಿಗೆ ಕೋಳ ಹಾಕಿದ ಸ್ಥಿತಿಯಲ್ಲಿಯೇ ಕ್ಲಿನಿಕ್ಕಿಗೆ ಹೋಗಿ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗಿದ್ದ ಅನಿವಾರ್ಯತೆಯನ್ನೂ ವಿವರಿಸುತ್ತಾಳೆ. ‘‘ಡಯಾಬಿಟೀಸ್ ರೋಗಿಯಾಗಿದ್ದ ನಾನು ತುಂಬಾ ನೀರು ಕುಡಿಯಬೇಕಿತ್ತು. ಆದರೆ ನಾನು ಅಪರಾಹ್ನದಿಂದ ನೀರಿಗಾಗಿ ಬೇಡುತ್ತಿದ್ದರೆ ರಾತ್ರಿ 12 ರ ಹೊತ್ತಿಗೆ ನನಗೆ ನೀರು ಕೊಡಲಾಗುತ್ತಿತ್ತು. ಕೆಲವೊಮ್ಮೆ ನಾನು ಶೌಚಾಲಯದ ನಳ್ಳಿಯಲ್ಲಿ ಬರುತ್ತಿದ್ದ ನೀರನ್ನೇ ಕುಡಿಯುತ್ತಿದ್ದೆ,’’ಎಂದು ಆಕೆ ಹೇಳುತ್ತಾಳೆ.
‘‘ಜೈಲಿನೊಳಗೆ ತುಂಬಾ ಕತ್ತಲೆಯಿತ್ತು. ಮಾಡಿನಲ್ಲಿ ಮಾತ್ರ ಕೆಲವು ಸಣ್ಣ ತೂತುಗಳಿಂದ ಬೆಳಕು ಬರುತ್ತಿತ್ತು,’’ಎಂದಿದ್ದಾಳೆ ಆಕೆ. ‘‘ಜೈಲಿನಲ್ಲಿದ್ದಷ್ಟೂ ಕಾಲ ತನಗೆ ಅವಮಾನ ಹಾಗೂ ಕಿರುಕುಳ ಉಂಟಾಗಿತ್ತು’’ಎಂದು ವಿವರಿಸುವ ಆಕೆ, ತಾನು ತುಂಬಾ ಉದ್ದವಿದ್ದುದರಿಂದ ಅಲ್ಲಿ ನೀಡಲಾಗುತ್ತಿದ್ದ ಸುಮಾರು ಒಂದು ಮೀಟರ್ ಉದ್ದದ ಹಾಸಿಗೆ ತನಗೆ ಸಾಕಾಗುತ್ತಿರಲಿಲ್ಲ, ಎಂದು ನೆನಪಿಸಿಕೊಂಡಿದ್ದಾಳೆ. ಅಲ್ಲಿ ನಮ್ಮನ್ನು ನಿಂದಿಸಲಾಗುತ್ತಿತ್ತು ಎಂದೂ ಆಕೆ ಹೇಳಿದ್ದಾಳೆ.
ಜೈಲಿನ ಆಹಾರ ವಿಷಯದಲ್ಲಿ ಪ್ರತಿಕ್ರಿಯಿಸಿದ ಆಕೆ ಅಲ್ಲಿನ ಆಹಾರ ಸಾಧಾರಣವಾಗಿತ್ತು. ವಾರಕ್ಕೊಮ್ಮೆ ಮಾಂಸ ಹಾಗೂ ಮೀನು ನೀಡಲಾಗುತ್ತಿತ್ತು. ಆದರೆ ಆಹಾರ ಸರಿಯಾಗಿ ಬೆಂದಿರದ ಕಾರಣ ಜೈಲು ವಾಸಿಗಳು ಅವುಗಳನ್ನು ಮತ್ತೆ ಬೇಯಿಸುತ್ತಿದ್ದರು,’’ಎಂದು ಹೇಳಿದ್ದಾಳೆ.
‘‘ತಾನು ಜೈಲಿನಲ್ಲಿದ್ದಾಗ ದೇವರಿಗೆ ಪ್ರಾರ್ಥಿಸುತ್ತಿದ್ದೆ ಹಾಗೂ ಕುರಾನ್ ಪಠಿಸುತ್ತಿದ್ದೆ. ಅಲ್ಲಿನ ಹುಡುಗಿಯರಿಗೆ ನಾನು ಇಮಾಮ್ ಆಗಿ ಬಿಟ್ಟಿದ್ದೆ,’’ಎಂದು ಹೇಳುತ್ತಾಳೆ ಆಕೆ.