×
Ad

ಅಥ್ಲೀಟ್‌ಗಳಿಗೆ ಸರಿಯಾದ ಆಹಾರವನ್ನೂ ಕೊಡದೇ ಕಳುಹಿಸಿದ ಭಾರತೀಯ ರಾಯಭಾರ ಕಚೇರಿ

Update: 2016-08-16 13:36 IST

ರಿಯೊ ಡಿ ಜನೈರೊ, ಆ.16: ಅದು ಭಾರತದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಬ್ರೆಜಿಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಯುಕ್ತವಾಗಿ ಆಯೋಜಿಸಿದ್ದ ಔತಣಕೂಟ. ಆದರೆ ಅಲ್ಲಿ ಸಂತೋಷದ ಬದಲಾಗಿ ಸೇರಿದ್ದ ಅಥ್ಲೀಟ್‌ಗಳಲ್ಲಿ ಅತೃಪ್ತಿ ಮೂಡಿಸಲು ಕಾರಣವಾಯಿತು.

ಕಾರಣ ಇಷ್ಟೇ; ಸಂಜೆ ವೇಳೆಗೆ ಈ ಸಂತೋಷಕೂಟ ಏರ್ಪಡಿಸಿದ್ದರಿಂದ ಸಹಜವಾಗಿಯೇ ಭಾರತೀಯ ಅಥ್ಲೀಟ್‌ಗಳು ಒಳ್ಳೆಯ ತಿಂಡಿ ತಿನಸು ನಿರೀಕ್ಷಿಸಿದ್ದರು. ಹಲವು ದಿನಗಳಿಂದ ತವರಿನ ಊಟದಿಂದ ವಂಚಿತರಾಗಿದ್ದರಿಂದ ಕನಿಷ್ಠ ಭಾರತೀಯ ಸ್ಕ್ಯಾಕ್ಸ್ ನ್ನು ನಿರೀಕ್ಷಿಸಿದ್ದರು. ಆದರೆ ಸಂತೋಷ ಕೂಟದಲ್ಲಿ ಸಿಕ್ಕಿದ್ದು, ಕಾಫಿ, ಚಹಾ, ಜ್ಯೂಸ್ ಹಾಗೂ ನೆಲಗಡಲೆ ಮಾತ್ರ. ಜೊತೆಗೆ ಕೆಲ ಚಾಕಲೇಟ್‌ಗಳು ಹಾಗೂ ಕ-ಕುಕೀಸ್‌ ಗಳು. ಇದರಿಂದ ಸುಮಾರು 30 ರಷ್ಟು ಮಂದಿ ಅಥ್ಲೀಟ್‌ಗಳು ಏನೂ ತಿನ್ನದೇ ಹಾಗೆಯೇ ಹೊರಟರು.

ಇದಕ್ಕಾಗಿ ಕ್ರೀಡಾಗ್ರಾಮದಿಂದ ನಮ್ಮನ್ನು ಕರೆಯಬೇಕಿತ್ತೇ ಎಂದು ಹೆಸರು ಹೇಳಬಯಸಲು ಇಚ್ಛಿಸದ ಅಥ್ಲೀಟ್ ಒಬ್ಬರು ಅಸಮಾಧಾನ ಹೊರಹಾಕಿದರು. ಇದಕ್ಕಾಗಿ ನಾಲ್ಕು ಗಂಟೆ ವ್ಯರ್ಥವಾಯಿತು ಎಂದು ಬೇಸರಿಸಿದರು.ಈ ಸಂತೋಷಕೂಟದ ಆಮಂತ್ರಣವನ್ನು ಕ್ರೀಡಾ ಕಾರ್ಯದರ್ಶಿ ರಾಜೀವ್ ಯಾದವ್ ಅವರು ಭಾರತೀಯ ರಾಜಭಾರ ಕಚೇರಿ ಹೆಸರಿನಲ್ಲಿ ಕಳುಹಿಸಿದ್ದರು.

ಅಥ್ಲೀಟ್‌ಗಳು ಶ್ರಮದಿಂದಾಗಿ ಸದಾ ಹಸಿದಿರುತ್ತಾರೆ. ಆದ್ದರಿಂದ ಕೂಟಕ್ಕೆ ಒಳ್ಳೆಯ ಊಟವನ್ನೇ ವ್ಯವಸ್ಥೆ ಮಾಡಬಹುದಿತ್ತು. ಇಲ್ಲದಿದ್ದರೆ ಒಳ್ಳೆಯ ಸ್ಕ್ಯಾಕ್ಸ್ ಆದರೂ ನೀಡಬಹುದಿತ್ತು ಎಂದು ಭಾರತದ ಒಲಿಂಪಿಕ್ ಅಥ್ಲೀಟ್ ತಂಡದ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿರುವ ಪವನ್‌ದೀಪ್ ಸಿಂಗ್ ಕೊಹ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News