×
Ad

ಮಹಾರಾಷ್ಟ್ರದಲ್ಲೊಬ್ಬ ಡಾ.ಯಮ!

Update: 2016-08-16 22:52 IST

ಪುಣೆ,ಆ.16: ಅಂಗನವಾಡಿ ಕಾರ್ಯಕರ್ತೆ ಯೋರ್ವಳ ಕೊಲೆ ಸಂಬಂಧ ಬಂಧಿಸಲ್ಪಟ್ಟಿರುವ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವೈದ್ಯನೋರ್ವನ ವಿಚಾರಣೆಯಿಂದ ಆತ ಸರಣಿ ಹಂತಕ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 2003- 2016ರ ಅವಧಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಇನ್ನೂ ಐವರನ್ನು ಕೊಂದು, ಶವಗಳನ್ನು ತನ್ನ ತೋಟದ ಮನೆಯಲ್ಲಿ ಹೂತು ಹಾಕಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಂಗಳವಾರ ಇಲ್ಲಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆ ಮಂಗಳಾ ಜೆಧೆ(47) ಎಂಬಾಕೆಯ ಹತ್ಯೆ ಪ್ರಕರಣದ ವಿಚಾರಣೆ ವೇಳೆ ವಾಯಿ ನಿವಾಸಿ ಡಾ.ಸಂತೋಷ ಪೋಳ್ ತನ್ನ ಕರ್ಮಕಾಂಡವನ್ನು ಬಾಯ್ಬಿಟ್ಟಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸೋಮವಾರ ರಾತ್ರಿ ಆತನ ತೋಟದ ಮನೆಯಲ್ಲಿ ಹೂಳಲಾಗಿದ್ದ ಜೆಧೆ ಸೇರಿದಂತೆ ಐವರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ ಎಂದು ಸತಾರಾ ಎಸ್‌ಪಿ ಸಂದೀಪ್ ಪಾಟೀಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮಹಾರಾಷ್ಟ್ರ ಪೂರ್ವ ಪ್ರಾಥಮಿಕ ಶಿಕ್ಷಿಕಾ ಸೇವಿಕಾ ಸಂಘದ ಅಧ್ಯಕ್ಷೆ ಜೆಧೆಯನ್ನು ಜೂ.1ರಂದು ಅಪಹರಿಸಿ ಹತ್ಯೆಗೈದ ಆರೋಪದಲ್ಲಿ ‘ಡಾ.ಡೆತ್’ ಎಂದೇ ಬಣ್ಣಿಸಲ್ಪಡುತ್ತಿರುವ ಪೋಳ್‌ನನ್ನು ಆ.11 ರಂದು ಬಂಧಿಸಲಾಗಿತ್ತು.
ಅನೈತಿಕ ಸಂಬಂಧಗಳು ಮತ್ತು ಚಿನ್ನ ಹಾಗೂ ಹಣಕ್ಕಾಗಿ ಈ ಹತ್ಯೆಗಳು ನಡೆದಿರಬಹುದೆಂದು ಪಾಟೀಲ್ ಹೇಳಿದರು.
ಪೋಳ್ ಮತ್ತು ಆತನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುವ ಆತನ ನರ್ಸ್ ಜ್ಯೋತಿ ಮಾಂಡ್ರೆ ಸೇರಿಕೊಂಡು ಜೆಧೆಯನ್ನು ಅಪಹರಿಸಿದ್ದರು ಮತ್ತು ಮಾರಣಾಂತಿಕ ಪ್ರಮಾಣದಲ್ಲಿ ಔಷಧಿಯನ್ನು ನೀಡಿ ಕೊಂದು, ಬಳಿಕ ತೋಟದ ಮನೆಯಲ್ಲಿ ಹೂತು ಹಾಕಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News