ಮಹಾರಾಷ್ಟ್ರ ರಾಜಭವನದಲ್ಲಿ ಬ್ರಿಟಿಷರ ಕಾಲದ ಬಂಕರ್ ಪತ್ತೆ

Update: 2016-08-17 03:30 GMT

ಮುಂಬೈ, ಆ.17: ಇಲ್ಲಿನ ಮಲಬಾರ್ ಹಿಲ್ಸ್‌ನಲ್ಲಿರುವ ರಾಜಭವನ ಸಂಕೀರ್ಣದಲ್ಲಿ, ಹಲವು ದಶಕಗಳಿಂದ ಮುಚ್ಚಿದ್ದ 150 ಮೀಟರ್ ಉದ್ದದ ಬ್ರಿಟಿಷರ ಕಾಲದ ಬಂಕರ್ ಒಂದನ್ನು ಮಹಾರಾಷ್ಟ್ರ ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ ರಾವ್ ಪತ್ತೆ ಮಾಡಿದ್ದಾರೆ.

ರಾವ್ ಪತ್ನಿ ವಿನೋದಾ ಅವರೊಂದಿಗೆ ಮಂಗಳವಾರ ಈ ಬಂಕರ್‌ಗೆ ಭೇಟಿ ನಿಡಿದರು. ಇದನ್ನು ಸಂರಕ್ಷಿಸುವ ಸಲುವಾಗಿ ವಿವಿಧ ಕ್ಷೇತ್ರಗಳ ತಜ್ಞರ ಸಲಹೆ ಪಡೆಯುವ ಇಂಗಿತವನ್ನು ರಾವ್ ವ್ಯಕ್ತಪಡಿಸಿದರು. ಮೂರು ತಿಂಗಳ ಹಿಂದೆ ಹಲವು ಮಂದಿ ಹಿರಿಯರು, ರಾಜಭವನದಲ್ಲಿ ಒಂದು ಸುರಂಗವಿದೆ ಎಂದು ಮಾಹಿತಿ ನೀಡಿದ ಬಳಿಕ ಇದನ್ನು ತೆರೆಯುವಂತೆ ರಾಜ್ಯಪಾಲರು ಆದೇಶ ನೀಡಿದ್ದರು.

ಈ ತಿಂಗಳ 12ರಂದು ರಾಜಭವನದ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ, ಪೂರ್ವಭಾಗದಲ್ಲಿ ಸುರಂಗದ ಪ್ರವೇಶದ್ವಾರಕ್ಕೆ ಅನತಿ ದೂರದಲ್ಲಿ ಕಟ್ಟಿದ್ದ ಅಡ್ಡಗೋಡೆಯನ್ನು ಕೆಡವಿದರು. ಆಗ ಇದು ಸುರಂಗಮಾರ್ಗವಲ್ಲ. ಬದಲು 13 ವಿವಿಧ ಅಳತೆಯ ಕೊಠಡಿಯನ್ನು ಒಳಗೊಂಡ ಬಂಕರ್ ಎನ್ನುವುದು ಬೆಳಕಿಗೆ ಬಂತು ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಈ ಬಂಕರ್ 20 ಅಡಿ ಎತ್ತರದ ಗೇಟ್‌ನೊಂದಿಗೆ ಆರಂಭವಾಗುತ್ತದೆ. ಪಶ್ಚಿಮ ಭಾಗದಲ್ಲಿ ಇದಕ್ಕೆ ಮೆಟ್ಟಲುಗಳಿವೆ. ಉದ್ದವಾದ ಪ್ಯಾಸೇಜ್‌ನ ಇಕ್ಕೆಲಗಳಲ್ಲಿ ವಿವಿಧ ಗಾತ್ರದ ಕೊಠಡಿಗಳಿವೆ ಎಂದು ವಿವರಿಸಿದ್ದಾರೆ. ಈ ಬಂಕರ್ 5000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಶೆಲ್ ಸ್ಟೋರ್, ಗಲ್ ಶೆಲ್, ಕ್ಯಾಟ್ರಿಡ್ಜ್ ಸ್ಟೋರ್, ಶೆಲ್ ಲಿಫ್ಟ್, ಪಂಪ್, ವರ್ಕ್‌ಶಾಪ್ ಎಂಬ ಫಲಕಗಳ ಕೊಠಡಿಗಳಿವೆ. ಸ್ವಾತಂತ್ರ್ಯ ಬಳಿಕ ಇದನ್ನು ಮುಚ್ಚಲಾಗಿದ್ದರೂ ಇಂದಿಗೂ ಸುಸ್ಥಿತಿಯಲ್ಲಿ ಉಳಿದಿವೆ. ಇಡೀ ಬಂಕರ್‌ಗೆ ಒಳಚರಂಡಿ ವ್ಯವಸ್ಥೆ ಇದ್ದು, ಶುದ್ಧ ಗಾಳಿ ಹಾಗೂ ಬೆಳಕಿನ ವ್ಯವಸ್ಥೆಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News