ಮಾಜಿ ಸಚಿವ ಬಿ.ಎ.ಮೊಯ್ದಿನ್‌ರಿಗೆ ದೇವರಾಜ ಅರಸು ಪ್ರಶಸ್ತಿ- ವೈಚಾರಿಕ ಸಂಪನ್ನತೆಗೆ ಸಂದ ಗೌರವ

Update: 2016-08-21 11:47 GMT

ರಾಜಕೀಯ ಲಾಬಿ,ಒತ್ತಡ, ಕಪ್ಪಕಾಣಿಕೆಗಳ ಸಂದಾಯವಾಗದೆ, ಅರ್ಹತೆಯ ಆಧಾರದಲ್ಲಿ ಸಚಿವ ಹುದ್ದೆಯನ್ನಲಂಕರಿಸಿದ ಪ್ರತಿಭಾವಂತ ಚಿಂತಕ ಬಿ.ಎ.ಮೊಯ್ದಿನ್. ರಾಜಕಾರಣದ ವಿವಿಧ ಪಟ್ಟುಗಳನ್ನು ಪ್ರಯೋಗಿಸಿ, ಮಂತ್ರಿಯಾಗಲೇಬೇಕೆಂದು ‘ಮಾಡು ಮಡಿ’ ಎಂಬಂತೆ ಕಂಡು ಬರುತ್ತಿದ್ದ ವಿಧಾನಸಭಾ ಸದಸ್ಯರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಯಾವ ಫಲಾಫೇಕ್ಷೆಯನ್ನೂ ಬಯಸದೆ, ನಂಬಿದ ತತ್ವಗಳಿಗಾಗಿ ತನ್ನನ್ನು ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದ ವಿಧಾನ ಪರಿಷತ್‌ನ ಸದಸ್ಯರಾದ ಬಿ.ಎ.ಮೊಯ್ದಿನ್‌ರನ್ನು ಸಂಪುಟ ದರ್ಜೆಯ ಸಚಿವನಾಗಿ ಆರಿಸಿಕೊಳ್ಳುವ ಮುಖ್ಯಮಂತ್ರಿ ಜೆ.ಎಚ್. ಪಾಟೀಲ್‌ರ ನಿರ್ಧಾರ ಅಂದು ರಾಜಕೀಯ ವಿಶ್ಲೇಷಕರನ್ನು ಅಚ್ಚರಿಯಲ್ಲಿ ಕೆಡವಿತ್ತು.

ಮೊಯ್ದಿನ್‌ರಿಗೂ ಇದು ಅನಿರೀಕ್ಷಿತ ವಾರ್ತೆಯಾಗಿತ್ತು. ಮನೆ ಬಾಗಿಲಿಗೇ ಬಂದ ಆಹ್ವಾನವನ್ನು ನಾಡ ಜನರ ಸೇವೆಗಾಗಿ ಒದಗಿದ ಅವಕಾಶ ಎಂದಷ್ಟೇ ಮೊಯ್ದಿನ್ ವಿನಯದಿಂದ ಸ್ವೀಕರಿಸಿದ್ದರು. ಸಚಿವ ಪದವಿಯ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಸಾವಿರ ಸಾವಿರ ‘ಪೇಯ್ಡ್’ ಬೆಂಬಲಿಗರನ್ನು ಕರೆದುಕೊಂಡು ಹೋಗದೆ ಸರಳವಾಗಿಯೇ ಪಾಲ್ಗೊಂಡು ಸಚಿವ ಸಂಪುಟ ಸೇರಿದ್ದರು.

ಮೊಯ್ದಿನ್, ಜೆ.ಎಚ್.ಪಾಟೀಲ್‌ರ ಸಂಪುಟಕ್ಕೆ ಕಳಶ ಪ್ರಾಯ ಎಂದು ನೇರ ನಡೆ ನುಡಿಯ ಪತ್ರಕರ್ತ ದಿ.ಲಂಕೇಶ್ ತನ್ನ ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆದು ಸಂಭ್ರಮಿಸಿದ್ದು ಮೊಯ್ದಿನ್ರ ಮುತ್ಸದ್ಧಿತನಕ್ಕೆ ದೊರೆತ ಪಾರಿತೋಷಕ ಎಂದೇ ಇತಿಹಾಸದಲ್ಲಿ ಪರಿಗಣಿತವಾಗಿದೆ. ಮನುಷ್ಯ ಬದುಕಿನ ಅಗ್ರಮಾನ್ಯ ಸಿದ್ಧಿ ಎಂದೆನ್ನಬಹುದಾದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪಕ್ವತೆಯ ಪ್ರತ್ಯಕ್ಷ ಉದಾಹರಣೆಯಾಗಿರುವ ಬಿ.ಎ.ಮೊಯ್ದಿನ್‌ರಿಗೆ ದೇವರಾಜ ಅರಸು ಪ್ರಶಸ್ತಿ ಅರ್ಹ ಗೌರವವಾಗಿದೆ.

ಅರಸು ಅವರ ಆದರಾಭಿಮಾನಕ್ಕೆ ಪಾತ್ರರಾದ ಆಪ್ತರೂ ಆಗಿದ್ದರು ಮೊಯ್ದಿನ್. ಇವತ್ತಿಗೂ ಜ್ಞಾನದ ದೀವಟಿಗೆಯಂತೆ ಸ್ವಸ್ಥ, ಸ್ವಾಭಿಮಾನಿ, ಸದೃಢ ಸಮಾಜಕ್ಕೆ ಹೊಂಬೆಳಕಿನಂತೆ ಪ್ರಜ್ವಲಿಸುತ್ತಿರುವ ನನ್ನ ಪ್ರೀತಿ ಯ ಮೊಯ್ದಿನ್ ಸಾಹೇಬರಿಗೆ ಎದೆ ತುಂಬಿ ಹಾರೈಸುವೆ. ಆಯುರಾರೋಗ್ಯವನ್ನೂ ದೇವರು ಅವರಿಗೆ ಕರುಣಿಸಲಿ.

ಫಾರೂಕ್ ಉಳ್ಳಾಲ್

Writer - ಫಾರೂಕ್ ಉಳ್ಳಾಲ್

contributor

Editor - ಫಾರೂಕ್ ಉಳ್ಳಾಲ್

contributor

Similar News