×
Ad

ದುಬೈನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

Update: 2016-08-17 19:19 IST

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹೊಸ ನಿವಾಸಿಗಳಿಗೆ ಡ್ರೈವಿಂಗ್ ಲೈಸನ್ಸ್ ಪಡೆಯುವ ನೀತಿ ನಿಯಮಗಳು, ಶುಲ್ಕ ಮುಂತಾದ ವಿಚಾರಗಳ ಬಗ್ಗೆ ಗೊಂದಲಗಳು ಇರಬಹುದು. ಎಲ್ಲ ಎಮಿರೇಟ್ ಗಳಿಗೆ ಪ್ರತ್ಯೇಕ ವಿಧಾನವಿದೆ. ಈ ಮಾರ್ಗದರ್ಶನ ದುಬೈಗಷ್ಟೇ ಸೀಮಿತ ಹಾಗೂ ಇತರ ಎಮಿರೇಟ್ ಗಳ ಲೈಸನ್ಸ್ ಮಾರ್ಗಸೂಚಿ ಇಷ್ಟರಲ್ಲೇ ಬರಲಿದೆ.

ಟಿಪ್ಪಣಿ: ಇದು ಒಂದು ಮಾಹಿತಿ ಮಾರ್ಗಸೂಚಿಯಷ್ಟೇ ಆಗಿದ್ದು, ವೈಯಕ್ತಿಕ ಪ್ರಶ್ನೆಗಳಿಗೆ ಆರ್‌ಟಿಎಯನ್ನು 8009090 ಮೂಲಕ ಸಂಪರ್ಕಿಸಬಹುದು.

ಅನಿವಾಸಿಗಳು ಸಾಮಾನ್ಯವಾಗಿ ಎದುರಿಸುವ ವಿವಿಧ ಸನ್ನಿವೇಶಗಳು ಮತ್ತು ಅದಕ್ಕೆ ಯಾವ ವಿಧಿವಿಧಾನ ಅನುಸರಿಸಬೇಕು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

ಅಧಿಕೃತ ಲೈಸನ್ಸ್ ಇಲ್ಲದಿರುವುದು

ನೀವು ಹೊಸಬರಾಗಿದ್ದರೆ, ದುಬೈ ಡ್ರೈವಿಂಗ್ ಸಂಸ್ಥೆಗಳು ಅಥವಾ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ನೋಂದಾಯಿಸಿಕೊಂಡು ಕನಿಷ್ಠ 40 ತರಗತಿಗಳಿಗೆ ಹಾಜರಾಗಬೇಕಾಗುತ್ತದೆ. ಬಳಿಕ ಆ ಶಾಲೆಯ ಚಾಲನಾ ಪರೀಕ್ಷೆಗಳಿಗೆ ಹಾಗೂ ಅಂತಿಮವಾಗಿ ಆರ್‌ಟಿಎ ಪರೀಕ್ಷೆಗೆ ಹಾಜರಾಗಬಹುದು. ಅರ್ಜಿದಾರ ಎಲ್ಲ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರೆ, ತಗಲುವ ಅಂದಾಜು ವೆಚ್ಚ ಸುಮಾರು 5500 ದಿರ್ಹಂ . (ಇದರಲ್ಲಿ ಎಲ್ಲ ತರಗತಿ ಹಾಗೂ ಪರೀಕ್ಷೆಯ ವೆಚ್ಚ ಸೇರುತ್ತದೆ. ಇದು ವಿವಿಧ ಶಾಲೆಗಳ ಸರಾಸರಿ ಶುಲ್ಕವಾಗಿದೆ).

ಅಗತ್ಯ ದಾಖಲೆಗಳು

► ಎಮಿರೇಟ್‌ನ ಗುರುತುಪತ್ರ (ಮೂಲ ಪ್ರತಿ ಮತ್ತು ಒಂದು ಹೆಚ್ಚುವರಿ ಪ್ರತಿ)

► ಪಾಸ್‌ಪೋರ್ಟ್ (ವೈಯಕ್ತಿಕ ವಿವರಗಳ ಜೆರಾಕ್ಸ್ ಪ್ರತಿ ಮತ್ತು ಪ್ರಸ್ತುತ ವೀಸಾ ಪುಟ)

► ಪಾಸ್‌ಪೋರ್ಟ್ ಅಳತೆಯ ಫೋಟೊ (8 ಅಥವಾ ಹೆಚ್ಚು)

► ಪ್ರಾಯೋಜಕರಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ). ಇದು ವೈಯಕ್ತಿಕ ಪ್ರಕರಣಗಳನ್ನು ಅವಲಂಬಿಸಿದೆ. ಆದ್ದರಿಂದ ಕರೆ ಮಾಡಿ ಖಚಿತಪಡಿಸಿಕೊಳ್ಳಿ,

► ಆದ್ಯತಾ ವರ್ಗಕ್ಕೆ ದೃಷ್ಟಿ ತಪಾಸಣೆ ಫಲಿತಾಂಶ (ಆದ್ಯತಾ ಡ್ರೈವಿಂಗ್ ಸ್ಕೂಲ್‌ಗಳಿಂದ ವ್ಯವಸ್ಥೆ ಮಾಡಬಹುದು)

ಅಧಿಕೃತ ಡ್ರೈವಿಂಗ್ ಲೈಸನ್ಸ್ ಹೊಂದಿರುವವರು, ಇದು ಯಾವ ದೇಶದಿಂದ ನೀಡಲಾದ ಲೈಸನ್ಸ್ ಎಂಬ ಆಧಾರದಲ್ಲಿ ಮತ್ತು ನಿಮ್ಮ ಪೌರತ್ವದ ಆಧಾರದಲ್ಲಿ, ನಿಮ್ಮ ಲೈಸನ್ಸನ್ನು ಯುಎಇ ಲೈಸನ್ಸ್‌ಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆ.

ವರ್ಗಾವಣೆಯಾದ ಲೈನಸ್ಸ್‌ಗಳು

ದುಬೈನಲ್ಲಿ ಲೈಸನ್ಸ್ ವರ್ಗಾವಣೆಗೆ ಆರ್‌ಟಿಎ ಒಟ್ಟು 33 ದೇಶಗಳ ಪಟ್ಟಿ ಮಾಡಿದೆ, ಇದರಲ್ಲಿ ಜಿಸಿಸಿ ದೇಶಗಳು ಹಾಗೂ ಸಹಕಾರ ದೇಶಗಳು ಸೇರುತ್ತವೆ.

ಮೇಲಿನ ಪಟ್ಟಿಯಲ್ಲಿ ಹಸಿರು ಬಣ್ಣದಲ್ಲಿ ಸೂಚಿಸಿದ ದೇಶಗಳ ಮಂದಿ ವರ್ಗಾವಣೆ ಲೈಸನ್ಸನ್ನು ಅರೆಬಿಕ್ ಮತ್ತು /ಅಥವಾ ಇಂಗ್ಲಿಷ್ ಗೆ ಭಾಷಾಂತರಿಸಬೇಕಾಗುತ್ತದೆ. ಇವುಗಳನ್ನು ರಾಯಭಾರ ಕಚೇರಿ ಅಥವಾ ಕಾನೂನಾತ್ಮಕವಾಗಿ ದೃಢೀಕೃತ ಭಾಷಾಂತರ ಏಜೆಂಟ್‌ಗಳಿಂದ ಮಾಡಿಸಬೇಕಾಗುತ್ತದೆ.

ವಿನಾಯಿತಿ ದೇಶ: ಲೈಸನ್ಸ್ ಮತ್ತು ಪೌರತ್ವ

ಈ ಮೇಲ್ಕಂಡ ಪಟ್ಟಿಯ ದೇಶದ ಪೌರರಾಗಿದ್ದಲ್ಲಿ ಮತ್ತು ಮೇಲ್ಕಂಡ ದೇಶಗಳ ಪೈಕಿ ಒಂದು ದೇಶದಿಂದ ಲೈಸನ್ಸ್ ಹೊಂದಿದ್ದಲ್ಲಿ (ಸ್ವದೇಶ ಅಥವಾ ಬೇರೆ ದೇಶ) ಪ್ರಕ್ರಿಯೆ ತೀರಾ ಸರಳ. ಉದಾಹರಣೆಗೆ, ನೀವು ಜಪಾನ್ ಪ್ರಜೆಯಾಗಿದ್ದು, ಜಪಾನ್‌ನ ಅಧಿಕೃತ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರೆ, ಅಥವಾ ಜಪಾನ್ ಪ್ರಜೆಯಾಗಿದ್ದು, ಸೌದಿಯ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರೆ ಮತ್ತು ಎಲ್ಲ ಅಧಿಕೃತ ದಾಖಲೆಗಳನ್ನು ಕ್ರಮಬದ್ಧವಾಗಿ ಹೊಂದಿದ್ದರೆ ನೇರವಾಗಿ ನೀವು ಆರ್‌ಟಿಎಗೆ ಹೋಗಿ 20 ನಿಮಿಷಗಳ ಒಳಗಾಗಿ ಯುಎಇ ಲೈಸನ್ಸ್ ಪಡೆಯಬಹುದು. ಇದರ ವೆಚ್ಚ 340 ದಿರ್ಹಂ.

ಅಗತ್ಯ ದಾಖಲೆಗಳು

► ಲೈಸನ್ಸ್‌ನ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿ

► ಪಾಸ್‌ಪೋರ್ಟ್ ಪ್ರತಿ ಮತ್ತು ಪ್ರಸ್ತುತ ವೀಸಾ ಪುಟದ ಪ್ರತಿ

► ಎಮಿರೇಟ್ಸ್‌ನ ಗುರುತುಪತ್ರ ಮತ್ತು ಪ್ರತಿ

►ನಿಗದಿತ ವರ್ಗಕ್ಕೆ ಕಣ್ಣು ತಪಾಸಣೆ ಫಲಿತಾಂಶ (ಡಿಎಚ್‌ಎ ಮಾನ್ಯತೆ ಪಡೆದ ತಪಾಸಣಾ ಕೇಂದ್ರಗಳಿಂದ ಪಡೆದದ್ದು ಆಗಿರಬೇಕು).

(ಇತರ ಯಾವುದೇ ದಾಖಲೆಗಳು ಅಗತ್ಯವಿದ್ದಲ್ಲಿ 8009090ಗೆ ಕರೆ ಮಾಡಬಹುದು).

ವಿಭಿನ್ನ ದೇಶ: ಲೈಸನ್ಸ್ / ಪೌರತ್ವ

 ನೀವು ಮೇಲಿನ ಪಟ್ಟಿಯಲ್ಲಿರುವ ದೇಶದ ಪ್ರಜೆಗಳಲ್ಲದಿದ್ದರೂ, ಮೇಲ್ಕಂಡ ದೇಶಗಳ ಅಧಿಕೃತ ಲೈಸನ್ಸ್ ಹೊಂಧಿದ್ದರೆ, ಉದಾಹರಣೆಗೆ ನೀವು ಭಾರತೀಯ ಪ್ರಜೆಯಾಗಿದ್ದು, ಸೌದಿ ಅರೇಬಿಯಾದ ಅಧಿಕೃತ ಲೈಸನ್ಸ್ ಹೊಂದಿದ್ದರೆ, ನಿಮ್ಮ ಲೈಸನ್ಸ್ ವಿಧಿವಿಧಾನಗಳಿಗೆ ನೀವು ಡ್ರೈವಿಂಗ್ ಸ್ಕೂಲ್‌ಗಳಲ್ಲಿ ನೋಂದಾಯಿಸಬೇಕಾಗುತ್ತದೆ.

ದುಬೈನ ಒಂದು ಡ್ರೈವಿಂಗ್ ಸ್ಕೂಲ್‌ನಲ್ಲಿ ಹೆಸರು ನೋಂದಾಯಿಸಿ, ಬಳಿಕ ಆರ್‌ಟಿಎ ಪರೀಕ್ಷೆಯ ಪ್ರಕ್ರಿಯೆಗೆ ನೋಂದಾಯಿಸಬೇಕಾಗುತ್ತದೆ. ನಿಮ್ಮ ಅಗತ್ಯ ದಾಖಲೆಗಳನ್ನು ಜತೆಗೆ ಒಯ್ದು, ಸ್ಕೂಲ್‌ನ ನೋಂದಣಿ ಶುಲ್ಕ ಮತ್ತು ಅರ್‌ಟಿಎ ಶುಲ್ಕದೊಂದಿಗೆ, ಆರ್‌ಟಿಎ ಪರೀಕ್ಷೆಗಳಿಗೆ ನೀವು ನೇರವಾಗಿ ವೇಳಾಪಟ್ಟಿ ಮತ್ತು ಸಂದರ್ಶನ ದಿನಾಂಕವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಒಟ್ಟು ವೆಚ್ಚ ಸುಮಾರು 2200 ದಿರ್ಹಂ ಆಗುತ್ತದೆ. ಆದರೆ ಇದು ನಿಮ್ಮ ಆದ್ಯತಾ ಸಂಸ್ಥೆಗಳಿಗೆ ಅನುಗುಣವಾಗಿ ವ್ಯತ್ಯಾಸವಾಗಬಹುದು. ಅಂತಿಮ ಪರೀಕ್ಷೆಯಲ್ಲಿ ನೀವು ಅನುತ್ತೀರ್ಣರಾದರೆ, ಮತ್ತೆ ಪರೀಕ್ಷೆ ತೆಗೆದುಕೊಳ್ಳಲು ನೀವು ಕನಿಷ್ಠ ಎಂಟು ತರಗತಿಗಳಿಗೆ ಹಾಜರಾಗಬೇಕಾಗುತ್ತದೆ.

ಅಗತ್ಯ ದಾಖಲೆಗಳು

► ಲೈಸನ್ಸ್ ಮೂಲಪ್ರತಿ ಮತ್ತು ಜೆರಾಕ್ಸ್ ಪ್ರತಿ.

► ಪಾಸ್‌ಪೋರ್ಟ್ (ಪ್ರಸ್ತುತ ವೀಸಾ ಪುಟದ ಪ್ರತಿ)

►ಎಮಿರೇಟ್‌ನ ಗುರುತುಪತ್ರ (ಮೂಲ ಪ್ರತಿ ಮತ್ತು ಒಂದು ಹೆಚ್ಚುವರಿ ಪ್ರತಿ)

►ಪ್ರಾಯೋಜಕರಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ). ಇದು ವೈಯಕ್ತಿಕ ಪ್ರಕರಣಗಳನ್ನು ಅವಲಂಬಿಸಿದೆ. ಆದ್ದರಿಂದ ಕರೆ ಮಾಡಿ ಖಚಿತಪಡಿಸಿಕೊಳ್ಳಿ,

► ಪಾಸ್‌ಪೋರ್ಟ್ ಅಳತೆಯ ಫೋಟೊ (8 ಅಥವಾ ಹೆಚ್ಚು)

► ಆದ್ಯತಾ ವರ್ಗಕ್ಕೆ ದೃಷ್ಟಿ ತಪಾಸಣೆ ಫಲಿತಾಂಶ (ಆದ್ಯತಾ ಡ್ರೈವಿಂಗ್ ಸ್ಕೂಲ್‌ಗಳಿಂದ ವ್ಯವಸ್ಥೆ ಮಾಡಬಹುದು)

ಆರ್‌ಟಿಎ ಪಟ್ಟಿಯಲ್ಲಿ ಸೇರದ ದೇಶಗಳ ಲೈಸನ್ಸ್ ಹೊಂದಿರುವವರು

ಮೇಲ್ಕಂಡ ಪಟ್ಟಿಯಲ್ಲಿಲ್ಲದ ದೇಶಗಳ ಲೈಸನ್ಸ್ ಹೊಂದಿದ್ದರೆ, ಅದನ್ನು ಯುಎಇ ಲೈಸನ್ಸ್‌ಗೆ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ಹಾಲಿ ಇರುವ ಲೈಸನ್ಸ್‌ನ ವೆಲಿಡಿಟಿಯ ಆಧಾರದಲ್ಲಿ, ನೀವು ಹಾಜರಾಗಬೇಕಾದ ತರಗತಿಗಳ ಸಂಖ್ಯೆ ವ್ಯತ್ಯಯವಾಗುತ್ತದೆ.

ನೀವು ಹೊಂದಿರುವ ಸ್ವದೇಶದ ಲೈಸನ್ಸ್‌ನ ವೆಲಿಡಿಟಿ ಐದು ವರ್ಷಕ್ಕಿಂತ ಅಧಿಕ ಇದ್ದರೆ, ನೀವು ಅಂತಿಮ ಪರೀಕ್ಷೆಗೆ ಹಾಜರಾಗುವ ಮುನ್ನ ಕನಿಷ್ಠ 20 ತರಗತಿಗಳಿಗೆ ಹಾಜರಾಗಬೇಕಾಗುತ್ತದೆ. ನೀವು ಹೊಂದಿರುವ ಸ್ವದೇಶದ ಲೈಸನ್ಸ್‌ನ ವೆಲಿಡಿಟಿ ಎರಡರಿಂದ ಐದು ಇದ್ದರೆ, ನೀವು ಅಂತಿಮ ಪರೀಕ್ಷೆಗೆ ಹಾಜರಾಗುವ ಮುನ್ನ ಕನಿಷ್ಠ 30 ತರಗತಿಗಳಿಗೆ ಹಾಜರಾಗಬೇಕಾಗುತ್ತದೆ. ನೀವು ಹೊಂದಿರುವ ಸ್ವದೇಶದ ಲೈಸನ್ಸ್‌ನ ವೆಲಿಡಿಟಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ, ನೀವು ಅಂತಿಮ ಪರೀಕ್ಷೆಗೆ ಹಾಜರಾಗುವ ಮುನ್ನ ಕನಿಷ್ಠ 40 ತರಗತಿಗಳಿಗೆ ಹಾಜರಾಗಬೇಕಾಗುತ್ತದೆ.

ಅಗತ್ಯ ದಾಖಲೆಗಳು

► ಲೈಸನ್ಸ್ ಮೂಲಪ್ರತಿ ಮತ್ತು ಜೆರಾಕ್ಸ್ ಪ್ರತಿ.

►ಪಾಸ್‌ಪೋರ್ಟ್ (ವೈಯಕ್ತಿಕ ವಿವರಗಳ ಪ್ರತಿ ಹಾಗೂ ಪ್ರಸ್ತುತ ವೀಸಾ ಪುಟದ ಪ್ರತಿ)

► ಎಮಿರೇಟ್‌ನ ಗುರುತುಪತ್ರ (ಮೂಲ ಪ್ರತಿ ಮತ್ತು ಒಂದು ಹೆಚ್ಚುವರಿ ಪ್ರತಿ)

► ಪಾಸ್‌ಪೋರ್ಟ್ ಅಳತೆಯ ಫೋಟೊ (8 ಅಥವಾ ಹೆಚ್ಚು)

► ಪ್ರಾಯೋಜಕರಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ). ಇದು ವೈಯಕ್ತಿಕ ಪ್ರಕರಣಗಳನ್ನು ಅವಲಂಬಿಸಿದೆ. ಆದ್ದರಿಂದ ಕರೆ ಮಾಡಿ ಖಚಿತಪಡಿಸಿಕೊಳ್ಳಿ,

► ಆದ್ಯತಾ ವರ್ಗಕ್ಕೆ ದೃಷ್ಟಿ ತಪಾಸಣೆ ಫಲಿತಾಂಶ (ಆದ್ಯತಾ ಡ್ರೈವಿಂಗ್ ಸ್ಕೂಲ್‌ಗಳಿಂದ ವ್ಯವಸ್ಥೆ ಮಾಡಬಹುದು)

ಇದರ ಶುಲ್ಕವು ನೀವು ಆದ್ಯತೆ ನೀಡುವ ಸಂಸ್ಥೆ ಹಾಗೂ ನಿಮ್ಮ ಲೈಸನ್ಸ್‌ನ ವೆಲಿಡಿಟಿಯನ್ನು ಅವಲಂಬಿಸಿರುತ್ತದೆ.

ಕೃಪೆ : Gulf News

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News