×
Ad

ಸೋಮಾರಿಗಳೇ, ನಿಮಗೊಂದು ಶುಭ ಸುದ್ದಿಯಿದೆ!

Update: 2016-08-17 21:03 IST

ಸೋಮಾರಿತನಕ್ಕೆ ನೀವೆಂದಾದರೂ ಶಿಕ್ಷೆ ಅನುಭವಿಸಿದ್ದೀರೇನು? ಸೋಮಾರಿಗಳಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಆರೋಗ್ಯ ಮನಶ್ಶಾಸ್ತ್ರದ ಜರ್ನಲ್ ನಡೆಸಿರುವ ಸಂಶೋಧನೆಯೊಂದು ಬುದ್ಧಿವಂತ ವ್ಯಕ್ತಿಗಳು ಸಾಮಾನ್ಯವಾಗಿ ಸಕ್ರಿಯವಾಗಿ ಕಾಲ ಕಳೆಯುವುದಕ್ಕಿಂತ ಸೋಮಾರಿಯಾಗಿರುವುದೇ ಹೆಚ್ಚು ಎಂದು ಹೇಳಿದೆ.

ಅಧಿಕ ಐಕ್ಯು ಇರುವ ವ್ಯಕ್ತಿಗಳಿಗೆ ಬೇಗನೇ ಬೋರ್ ಹೊಡೆಯುವುದಿಲ್ಲ. ಇದೇ ಕಾರಣದಿಂದ ಅವರು ಹೆಚ್ಚು ಸಮಯವನ್ನು ಕೆಲಸ ಮಾಡುವ ಬದಲಾಗಿ ಚಿಂತನೆಯಲ್ಲೇ ಕಾಲ ಕಳೆಯುತ್ತಾರೆ. ಸಕ್ರಿಯ ವ್ಯಕ್ತಿಗಳು ಹೆಚ್ಚು ಸೋಮಾರಿಯಾಗಿ ಕಳೆಯುವುದಿಲ್ಲ, ಏಕೆಂದರೆ ಅವರು ದೈಹಿಕ ಚಟುವಟಿಕೆಗಳಿಂದ ತಮ್ಮ ಮನಸ್ಸನ್ನು ಪ್ರಚೋದಿಸಿಕೊಳ್ಳುತ್ತಾರೆ. ಅವರು ಕಡಿಮೆ ಚಿಂತನೆ ಮಾಡುತ್ತಾರೆ ಅಥವಾ ಬೇಗನೇ ಬೋರ್ ಹೊಡೆಸಿಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.

ಫ್ಲೋರಿಡಾ ಗಲ್ಫ್ ಕರಾವಳಿ ವಿಶ್ವವಿದ್ಯಾಲಯದ ಸಂಶೋಧಕರು 30 ನಿಮಿಷಗಳ ಹಳೇ ಪರೀಕ್ಷೆಯೊಂದನ್ನು ವಿದ್ಯಾರ್ಥಿಗಳ ಸಮೂಹಕ್ಕೆ ಕೊಟ್ಟು ಈ ಅಧ್ಯಯನ ಮಾಡಿದ್ದಾರೆ. ಚಿಂತಿಸುವ ಅಗತ್ಯದ ಬಗ್ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸಿರುವ 30 ವಿದ್ಯಾರ್ಥಿಗಳು ಮತ್ತು ಮಾನಸಿಕವಾಗಿ ಒತ್ತಡ ಹೇರುವ ಯಾವುದೇ ಕೆಲಸವನ್ನು ಹೆಚ್ಚು ಇಷ್ಟಪಡದೆ ಇರುವ 30 ವಿದ್ಯಾರ್ಥಿಗಳಿಗೆ ನಡೆಸಿದ ಸಂಶೋಧನೆಯಲ್ಲಿ ಈ ವಿವರ ತಿಳಿದುಬಂದಿದೆ.

ಇವರಿಗೆ ನಡೆಸಿರುವ ಪ್ರಾಥಮಿಕ ಪರೀಕ್ಷೆಯಲ್ಲಿ, "ಸಮಸ್ಯೆಗಳಿಗೆ ಹೊಸ ಪರಿಹಾರಗಳು ಬರುವಂತಹ ಕೆಲಸವನ್ನು ಇಷ್ಟಪಡುತ್ತೇನೆ" ಮತ್ತು "ನನಗೆ ಎಷ್ಟು ಅಗತ್ಯವೋ ಅಷ್ಟೇ ಕಠಿಣವಾಗಿ ನಾನು ಆಲೋಚಿಸುತ್ತೇನೆ" ಎನ್ನುವ ಎರಡು ಆಯ್ಕೆಗಳನ್ನು ನೀಡಲಾಗಿತ್ತು. ಹೀಗೆ 30 ಮಂದಿ ಚಿಂತಕರು ಮತ್ತು 30 ಮಂದಿ ಚಿಂತಕರಲ್ಲದವರನ್ನು ಆರಿಸಲಾಗಿದೆ. ಅವರೆಷ್ಟು ದೈಹಿಕವಾಗಿ ಸಕ್ರಿಯರಾಗಿದ್ದಾರೆ ಎಂದು ತಿಳಿದುಕೊಳ್ಳಲು ಏಳು ದಿನಗಳ ಕಾಲ ಅವರ ನಾಡಿಗೆ ಧರಿಸಲು ಅಕ್ಸಲರೋಮೀಟರ್ ಕೊಡಲಾಗಿತ್ತು.

ಫಲಿತಾಂಶದಲ್ಲಿ ಯೋಚಿಸುವ ಸಮೂಹವು ವಾರದ ದಿನಗಳಲ್ಲಿ ಅತೀ ಕಡಿಮೆ ಸಕ್ರಿಯವಾಗಿರುವುದು ಕಂಡುಬಂದಿದೆಯಾದರೂ ವಾರಾಂತ್ಯದಲ್ಲಿ ಎರಡೂ ಸಮೂಹಗಳ ನಡುವೆ ವ್ಯತ್ಯಾಸವಿರಲಿಲ್ಲ. ಈ ಫಲಿತಾಂಶವನ್ನು ಅರ್ಥ ಮಾಡಿಕೊಳ್ಳುವುದು ಸಂಶೋಧಕರಿಗೂ ಕಷ್ಟವಾಗಿತ್ತು.

ಸಂಶೋಧನೆಯ ನೇತೃತ್ವ ವಹಿಸಿರುವ ಡಾಡ್ ಮೆಕ್ಲರಿ ಪ್ರಕಾರ ಬುದ್ಧಿವಂತರಾಗಿದ್ದೂ ಸೋಮಾರಿಗಳಾಗುವುದು ಜಡವಾದ ಜೀವನಶೈಲಿಗೆ ಕಾರಣವಾಗಬಹುದು ಮತ್ತುಅದರಿಂದ ನಕಾರಾತ್ಮಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದೂ ಸಹ ಎಚ್ಚರಿಸಿದ್ದಾರೆ. "ಆರೋಗ್ಯಕರ ಜೀವನಕ್ಕೆ ಸಕ್ರಿಯ ಜೀವನಶೈಲಿ ಅಗತ್ಯವಿದೆ. ಕಡಿಮೆ ಸಕ್ರಿಯರಾಗಿರುವುದು ಅರಿವಾದಲ್ಲಿ ಮತ್ತು ನಿಷ್ಕ್ರಿಯತೆಯ ನಷ್ಟದ ಬಗ್ಗೆ ತಿಳಿದುಕೊಂಡಲ್ಲಿ ಹೆಚ್ಚು ಚಿಂತಿಸುವ ವ್ಯಕ್ತಿಗಳು ಇಡೀ ದಿನ ಸಕ್ರಿಯರಾಗಲು ಪ್ರಯತ್ನಿಸಬಹುದು. ಸೋಮಾರಿತನ ಎಂದ ಕೂಡಲೇ ಅತೀ ಬುದ್ಧಿವಂತರೇನೂ ಆಗಿರುವುದಿಲ್ಲ. ಬುದ್ಧಿವಂತ ವ್ಯಕ್ತಿಗಳು ರಾತ್ರಿ ತಡವಾಗಿ ಮಲಗಿ ತಮ್ಮ ಜೀವನವನ್ನು ಹೆಚ್ಚು ಗೊಂದಲಮಯವಾಗಿಸಿಕೊಂಡಿರುವುದು ಸತ್ಯ" ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.

ಕೃಪೆ: www.huffingtonpost.ca

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News