ಯೋಜನೆಗೆ ಇನ್ನಾದರೂ ಜೀವ ಬಂದೀತೇ?
ಮಾನ್ಯರೆ,
ಮಂಗಳೂರು ಹಳೆ ಬಸ್ ನಿಲ್ದಾಣದಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣದ ಬಗ್ಗೆ 10-15 ವರ್ಷಗಳ ಮೊದಲೇ ಪ್ರಸ್ತಾವನೆ ಇದ್ದರೂ ಅದು ನನೆಗುದಿಗೆ ಬಿದ್ದಿದ್ದು, ಇದೀಗ ಮರುಜೀವ ಬಂದಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮನಪಾ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡುವುದು ಮಾತ್ರವಾಗಿದೆ. ಆದರೆ ಕಾರ್ಯರೂಪಕ್ಕೆ ಬರುವ ಅಥವಾ ಆರಂಭಿಸಿದ್ದನ್ನು ಕ್ಲಪ್ತ ಸಮಯದಲ್ಲಿ ಮುಗಿಸುವ ಛಲ ಕಾಣುವುದಿಲ್ಲ. ಹೊಸದಾಗಿ ಆಯ್ಕೆಯಾದ ಮೇಯರ್‌ಗಳು ಬಂದ ಸಂದರ್ಭದಲ್ಲಿ ಯೋಜನೆಗಳ ಬಗ್ಗೆ ಮಾತನಾಡು ತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಉದಾಹರಣೆಗೆ ಪಂಪ್‌ವೆಲ್ ಬಸ್ ನಿಲ್ದಾಣಕ್ಕಾದ ಗತಿಯಂತೆ.
2001ರಲ್ಲಿ 30 ಕೋಟಿ. ರೂ. ವೆಚ್ಚದಲ್ಲಿ ಈ ಕಾರ್ ಪಾರ್ಕಿಂಗ್ ಕಾಂಪ್ಲೆಕ್ಸ್ ಯೋಜನೆ ಅನುಷ್ಠಾನದ ಕುರಿತು ಪ್ರಸ್ತಾವನೆ ಮಾಡಿದ್ದರೂ, ಆ ಕಡತ ಮೇಲೇಳಲೇ ಇಲ್ಲ. ನಂತರ 2009ರಲ್ಲಿ 110 ಕೋಟಿ ರೂ.ನ ಬೃಹತ್ ಯೋಜನೆ ಪ್ರಸ್ತಾವನೆಯಾದರೂ ನಂತರ ಕಾರ್ಯಗತವಾಗಲಿಲ್ಲ. ಈಗ ಪುನಃ ಈ ಯೋಜನೆ ಬಗ್ಗೆ ಸುದ್ದಿ ಕೇಳಿ ಬರುತ್ತಿದೆ. ಇದಕ್ಕೆ ಜೀವ ಬರುವುದು ಯಾವಾಗವೋ ಗೊತ್ತಿಲ್ಲ.
ನಗರದಲ್ಲಿ ಈಗಿನ ವಾಹನಗಳ ನಿಬಿಡತೆಯನ್ನು ಗಮನಿಸಿದರೆ ಹಂಪನಕಟ್ಟೆಯಲ್ಲದೆ ಇತರ ಕೆಲವೆಡೆಗಳಲ್ಲಿ (ಕಂಕನಾಡಿ, ಬಲ್ಮಠ, ಬಿಜೈ, ಲಾಲ್‌ಬಾಗ್ ಇತ್ಯಾದಿ) ಮಲ್ಟಿಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್‌ನ ಅಗತ್ಯವಿದೆ. ಈಗ ನಗರದಲ್ಲಿ ಹೆಚ್ಚಿನೆಡೆಗಳಲ್ಲಿ ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸುವ ಪರಿಸ್ಥಿತಿಯಿದೆ. ಆದ್ದರಿಂದ ಈ ಯೋಜನೆ ಈ ಸಲವಾದರೂ ತುರ್ತಾಗಿ ಜಾರಿಗೊಳ್ಳಲಿ.