ಖೇಲ್‌ರತ್ನ ಪ್ರಶಸ್ತಿ: ದೀಪಾ ಕರ್ಮಾಕರ್ ಹೆಸರು ಶಿಫಾರಸು

Update: 2016-08-17 18:11 GMT

ಹೊಸದಿಲ್ಲಿ, ಆ.17: ಭಾರತದ ಇಬ್ಬರು ಒಲಿಂಪಿಯನ್‌ಗಳಾದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಹಾಗೂ ಶೂಟರ್ ಜಿತುರಾಯ್ ಹೆಸರನ್ನು ಈ ವರ್ಷದ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಖೇಲ್‌ರತ್ನ ಪ್ರಶಸ್ತಿಯನ್ನು ಪ್ರತಿ ವರ್ಷ ಓರ್ವ ಕ್ರೀಡಾಪಟುವಿಗೆ ನೀಡಲಾಗುತ್ತದೆ. ಕಳೆದ ವರ್ಷ ಸಾನಿಯಾ ಮಿರ್ಝಾ ಈ ಪ್ರಶಸ್ತಿ ಸ್ವೀಕರಿಸಿದ್ದರು.

 ಸುಮಾರು 52 ವರ್ಷಗಳ ಬಳಿಕ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೊದಲ ಜಿಮ್ನಾಸ್ಟಿಕ್ ತಾರೆ 23ರ ಪ್ರಾಯದ ದೀಪಾ ವೋಲ್ಟ್‌ನಲ್ಲಿ ಫೈನಲ್‌ಗೆ ತಲುಪಿದ್ದು, 15,006 ಅಂಕ ಗಳಿಸಿ ನಾಲ್ಕನೆ ಸ್ಥಾನ ಪಡೆದಿದ್ದರು. ಕೇವಲ 0.150 ಅಂಕಗಳಿಂದ ಕಂಚಿನ ಪದಕ ವಂಚಿತರಾಗಿದ್ದರು.

2014ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ದೀಪಾ ಇತಿಹಾಸ ನಿರ್ಮಿಸಿದ್ದರು. 2015ರಲ್ಲಿ ಹಿರೋಶಿಮಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಕೇರಳದಲ್ಲಿ ನಡೆದಿದ್ದ ನ್ಯಾಶನಲ್ ಗೇಮ್ಸ್‌ನಲ್ಲಿ 5 ಚಿನ್ನದ ಪದಕ ಬಾಚಿಕೊಂಡಿದ್ದರು.

ದೀಪಾರ ಕೋಚ್ ಬಿಶ್ವೇಶ್ವರ ನಂದಿ ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

 ವಿಶ್ವದ ನಂ.3ನೆ ರ್ಯಾಂಕಿನ ಶೂಟರ್ ಜಿತುರಾಯ್ ಒಲಿಂಪಿಕ್ಸ್‌ನಲ್ಲಿ 10ಮೀ. ಏರ್‌ಪಿಸ್ತೂಲ್‌ನಲ್ಲಿ 8ನೆ ಸ್ಥಾನ ಪಡೆದು ನಿರಾಸೆಗೊಳಿಸಿದ್ದರು. ಆದರೆ, ಅವರು 2014ರ ಏಷ್ಯನ್ ಗೇಮ್ಸ್ ಹಾಗು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 2 ಬಾರಿ ಐಎಸ್‌ಎಸ್‌ಎಫ್ ಕಪ್ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News