×
Ad

2012-13: ಶೇ.30 ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಕೇವಲ 14 ಲಕ್ಷ ಜನರು

Update: 2016-08-18 18:33 IST

ಹೊಸದಿಲ್ಲಿ,ಆ.18: ಆದಾಯ ತೆರಿಗೆ ರಿಟರ್ನ್‌ಗಳ ಅಂಕಿಅಂಶಗಳಂತೆ 2012-13ನೇ ಆದಾಯ ತೆರಿಗೆ ವರ್ಷದಲ್ಲಿ ದೇಶದ 2.89 ಕೋಟಿ ವ್ಯಕ್ತಿಗತ ತೆರಿಗೆದಾತರ ಪೈಕಿ ಕೇವಲ 14 ಲಕ್ಷ ಜನರು(ಶೇ.4.6) 10ಲ.ರೂ.ಗೂ ಹೆಚ್ಚಿನ ವಾರ್ಷಿಕ ಆದಾಯವನ್ನು ಘೋಷಿಸಿಕೊಂಡಿದ್ದು, ಗರಿಷ್ಠ ಶೇ.30 ಆದಾಯ ತೆರಿಗೆ ವ್ಯಾಪ್ತಿಗೆ ಸೇರಿದ್ದಾರೆ.

ಈ 14 ಲಕ್ಷ ಜನರು ಪಾವತಿಸುವ ತೆರಿಗೆಯು ಒಟ್ಟು ವ್ಯಕ್ತಿಗತ ಆದಾಯ ತೆರಿಗೆ ಸಂಗ್ರಹದ ಶೇ.75ರಷ್ಟಿದೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಕಾರ್ಯದರ್ಶಿ ಹಸ್ಮುಖ ಆಧಿಯಾ ಅವರು, ತೆರಿಗೆ ಜಾಲವನ್ನು ವಿಸ್ತರಿಸುವುದು ಈಗ ಅಗತ್ಯವಿದೆ ಎನ್ನುವುದನ್ನು ಈ ಅಂಕಿಅಂಶಗಳು ಸ್ಪಷ್ಟವಾಗಿ ಸೂಚಿಸುತ್ತಿವೆ ಎಂದು ಹೇಳಿದರು.

ರಿಟರ್ನ್‌ಗಳನ್ನು ಸಲ್ಲಿಸಿರುವ 2.89 ಕೋ.ತೆರಿಗೆದಾತರಲ್ಲಿ 1.63 ಕೋ.(ಶೇ.56.4) ಜನರು ತೆರಿಗೆಯನ್ನು ಪಾವತಿಸಿಲ್ಲ ಮತ್ತು 84 ಲ.(ಶೇ.29.3) ಜನರು ಶೇ.10 ತೆರಿಗೆ ವ್ಯಾಪ್ತಿಯಲ್ಲಿದ್ದಾರೆ ಎನ್ನುವುದನ್ನು ಅಂಕಿಅಂಶಗಳ ವಿಶ್ಲೇಷಣೆಯು ಬೆಳಕಿಗೆ ತಂದಿದೆ.

ಐದು ಕೋ.ರೂ.ಗೂ ಅಧಿಕ ಆದಾಯವನ್ನು 2,669 ಜನರು ಘೋಷಿಸಿಕೊಂಡಿದ್ದು, ಇವರು ಪಾವತಿಸುವ ತೆರಿಗೆಯು ಒಟ್ಟು ತೆರಿಗೆ ಸಂಗ್ರಹದ ಶೇ.9.6ರಷ್ಟಾಗುತ್ತದೆ.

1.51 ಕೋ.ಜನರ ತೆರಿಗೆಯು ಮೂಲದಲ್ಲಿ ಕಡಿತಗೊಂಡಿದ್ದು, ಅವರ್ಯಾರೂ ರಿಟರ್ನ್‌ಗಳನ್ನು ಸಲ್ಲಿಸಿಲ್ಲ. ಅವರು ರಿಟರ್ನ್‌ಗಳನ್ನು ಸಲ್ಲಿಸಿದ್ದರೆ 2013-13ನೇ ಸಾಲಿನಲ್ಲಿ ರಿಟರ್ನ್‌ಗಳನ್ನು ಸಲ್ಲಿಸಿದವರ ಸಂಖ್ಯೆ 4.4ಕೋ.ಗೆ ಏರಿಕೆಯಾಗಿರುತ್ತಿತ್ತು.

ಆದಾಯ ತೆರಿಗೆ ಕಾಯ್ದೆಯಂತೆ ವಾರ್ಷಿಕ 2.5 ಲ.ರೂ.ಗಿಂತ ಕಡಿಮೆ ಆದಾಯವುಳ್ಳವರು ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ. 2.5ಲ.ದಿಂದ 5 ಲ.ರೂ.ವರೆಗೆ ಆದಾಯ ಹೊಂದಿದವರು ಶೇ.10 ಮತ್ತು 10 ಲ.ಕ್ಕೂ ಅಧಿಕ ಆದಾಯವಿರುವವರು ಶೇ.30 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News