×
Ad

ಮುಸ್ಲಿಮ್ ಐಎಎಸ್ ಅಧಿಕಾರಿಗಳ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳ, ಐಪಿಎಸ್‌ನಲ್ಲಿ ಕುಸಿತ

Update: 2016-08-18 23:45 IST

ಮುಂಬೈ, ಆ.18: ಮುಸ್ಲಿಮರ ಕಲ್ಯಾಣಕ್ಕಾಗಿ ಸಾಚಾರ್ ಸಮಿತಿ ಮಾಡಿದ ಹಲವಾರು ಶಿಫಾರಸುಗಳಲ್ಲಿ ಮುಸ್ಲಿಮ್ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪ್ರಮಾಣ ಏರಿಕೆಯಾಗುವ ಅಗತ್ಯವಿದೆಯೆಂದು ಹೇಳಿದ್ದು ಮುಖ್ಯವಾಗಿತ್ತು. ಆ ಬಳಿಕದ ಸುಮಾರು ಹತ್ತು ವರ್ಷಗಳಲ್ಲಿ ಮುಸ್ಲಿಮ್ ಐಎಎಸ್ ಅಧಿಕಾರಿಗಳ ಪ್ರಮಾಣ ಸ್ವಲ್ಪಮಟ್ಟಿಗೆ ಏರಿಕೆಯಾದರೆ ಮುಸ್ಲಿಮ್ ಐಪಿಎಸ್ ಅಧಿಕಾರಿಗಳ ಪ್ರಮಾಣ ಕುಸಿದಿದೆ ಎಂದು ತಿಳಿದುಬಂದಿದೆ.

ದೇಶದ 3,209 ಐಪಿಎಸ್ ಅಧಿಕಾರಿಗಳ ಪೈಕಿ 128 (ಶೇ.4)ಮುಸ್ಲಿಮ್ ಐಪಿಎಸ್ ಅಧಿಕಾರಿಗಳಿದ್ದರು ಎಂದು 2006ರ ನವೆಂಬರ್‌ನಲ್ಲಿ ಸಲ್ಲಿಸಲಾದ ಸಾಚಾರ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 2016ರ ಜನವರಿಯಲ್ಲಿ 3,754 ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿಗಳ ಪೈಕಿ ಕೇವಲ 120(ಶೇ.3.19)ರಷ್ಟು ಮಾತ್ರ ಮುಸ್ಲಿಮ್ ಐಪಿಎಸ್ ಅಧಿಕಾರಿಗಳಿದ್ದಾರೆ ಎಂದು ತಿಳಿದುಬಂದಿದೆ.
 ಯುಪಿಎಸ್ಸಿ ಪರೀಕ್ಷೆ ಪಾಸು ಮಾಡುವುದರ ಅಥವಾ ರಾಜ್ಯ ನಾಗರಿಕ ಸೇವೆಯಿಂದ ಪದೋನ್ನತಿಯಾಗುವ ಮೂಲಕ ಅಭ್ಯರ್ಥಿಗಳನ್ನು ಕೇಂದ್ರ ನಾಗರಿಕ ಸೇವೆಯ ಕೇಡರ್‌ಗೆ ತೆಗೆದುಕೊಳ್ಳಲಾಗುತ್ತದೆ. ರಾಜ್ಯ ಕೇಡರ್‌ನಿಂದ ಪದೋನ್ನತಿ ಗೊಂಡ ಮುಸ್ಲಿಮ್ ಐಪಿಎಸ್ ಅಧಿಕಾರಿಗಳ ಪ್ರಮಾಣ ಗಣನೀಯವಾಗಿ ಕುಸಿದ್ದಿದ್ದು, 2006ರಲ್ಲಿ ಶೇ.7ರಷ್ಟಿದ್ದ ಇಂತಹ ಐಪಿಎಸ್ ಅಧಿಕಾರಿಗಳ ಪ್ರಮಾಣ 2016ರ ಜನವರಿ ವೇಳೆಗೆ ಶೇ.3.82ರಷ್ಟು ಕುಸಿದಿದೆ. ರಾಜ್ಯ ಕೇಡರ್‌ನಿಂದ 912ರಷ್ಟು ಐಪಿಎಸ್‌ಗೆ ಪದೋನ್ನತಿಗೊಂಡವರ ಪೈಕಿ 65ರಷ್ಟು ಮುಸ್ಲಿಮ್ ಐಪಿಎಸ್ ಅಧಿಕಾರಿಗಳಿದ್ದಾರೆ ಎಂದು ಸಾಚಾರ್ ಸಮಿತಿ ಪಟ್ಟಿ ಮಾಡಿತ್ತು. ಆದರೆ, 2016ರಲ್ಲಿ 1,150 ಐಪಿಎಸ್ ಪದೋನ್ನತಿಗೊಂಡ ಅಧಿಕಾರಿಗಳ ಪೈಕಿ ಕೇವಲ 44ರಷ್ಟು ಮಾತ್ರ ಮುಸ್ಲಿಮ್ ಐಪಿಎಸ್ ಅಧಿಕಾರಿಗಳಿದ್ದಾರೆ ಎಂದು ತಿಳಿದುಬಂದಿದೆ.
 ನೇರವಾಗಿ ಯುಪಿಎಸ್ಸಿ ಮೂಲಕ ಆಯ್ಕೆಯಾದ ಐಪಿಎಸ್ ಅಧಿಕಾರಿಗಳ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ.ಸಾಚಾರ್ ಸಮಿತಿಯ ವರದಿಯ ಸಮಯದಲ್ಲಿ ಒಟ್ಟು 2,297 ನೇರ ಆಯ್ಕೆಯಾದ ಐಪಿಎಸ್ ಅಧಿಕಾರಿಗಳ ಪೈಕಿ 63 ಮಂದಿ (ಶೇ.2.7)ಮುಸ್ಲಿಮರಿದ್ದರು. ಈಗ ಅದು 2,604ರಲ್ಲಿ 76 ಮಂದಿಗೆ (ಶೇ.2.91) ಏರಿಕೆಯಾಗಿದೆ.
 ತನ್ಮಧ್ಯೆ, ಐಎಎಸ್ ಅಧಿಕಾರಿಗಳ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಸಾಚಾರ್ ಸಮಿತಿ ವರದಿಯನ್ನು ಸಲ್ಲಿಸಿದ್ದ ವೇಳೆ ಶೇ.3ರಷ್ಟಿದ್ದ ಮುಸ್ಲಿಮ್ ಐಎಎಸ್ ಅಧಿಕಾರಿಗಳ ಪ್ರಮಾಣವು 2016ರಲ್ಲಿ ಶೇ.3.32 ಆಗಿದೆ. ಈ ವರ್ಷದ ಜನವರಿಯ ವೇಳೆಗೆ 4,926 ಐಎಎಸ್ ಅಧಿಕಾರಿಗಳ ಪೈಕಿ 164 ಮಂದಿ ಮುಸ್ಲಿಮ್ ಅಧಿಕಾರಿಗಳಿದ್ದಾರೆ. ಅದರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸುಗೊಂಡ 3,511 ಅಭ್ಯರ್ಥಿಗಳ ಪೈಕಿ 96 ಮಂದಿ ಮುಸ್ಲಿಮ್ ಅಭ್ಯರ್ಥಿಗಳು ನೇರ ನೇಮಕಾತಿಗೊಂಡವರಾಗಿದ್ದಾರೆ. 2006ರಲ್ಲಿ ಶೇ.2.3ರಷ್ಟಿದ್ದ ಪ್ರಮಾಣವು ಶೇ.2.7ರಷ್ಟು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
  ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಒಟ್ಟು ಶೇ.14 ಪ್ರಮಾಣಕ್ಕಿಂತ ಅಧಿಕವಿದ್ದರೂ ಆಡಳಿತತ್ಮಾಕ ಸೇವೆಗಳಲ್ಲಿ ಮುಸ್ಲಿಮರ ಪ್ರಮಾಣ ನಗಣ್ಯವಾಗಿದೆ ಎಂದು ಸಾಚಾರ್ ಸಮಿತಿಯ ವೌಲ್ಯಮಾಪನ ಸಮಿತಿಯ ಮುಖ್ಯಸ್ಥರಾಗಿದ್ದ ಡಾ.ಅಮಿತಾಭ್ ಕುಂಡು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News