×
Ad

ಟರ್ಕಿ: ಅವಳಿ ಸ್ಫೋಟ; 6 ಸಾವು 100ಕ್ಕೂ ಅಧಿಕ ಮಂದಿಗೆ ಗಾಯ

Update: 2016-08-19 00:06 IST

ಅಂಕಾರ, ಆ. 18: ಟರ್ಕಿಯಲ್ಲಿ ಪೊಲೀಸ್ ಠಾಣೆಗಳನ್ನು ಗುರಿಯಿರಿಸಿ ನಡೆಸಲಾದ ಎರಡು ಕಾರ್ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

ಪೂರ್ವ ಟರ್ಕಿಯ ವಾನ್ ರಾಜ್ಯದಲ್ಲಿರುವ ಪೊಲೀಸ್ ಠಾಣೆಯೊಂದರ ಮೇಲೆ ಬುಧವಾರ ರಾತ್ರಿ ನಡೆದ ಕಾರ್‌ಬಾಂಬ್ ಸ್ಫೋಟದಲ್ಲಿ ಓರ್ವ ಪೊಲೀಸ್ ಅಧಿಕಾರಿ ಮತ್ತು ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 20 ಪೊಲೀಸ್ ಅಧಿಕಾರಿಗಳು ಸೇರಿದಂತೆ ಡಝನ್‌ಗಟ್ಟಳೆ ಇತರರು ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದರು.

ಈ ದಾಳಿಯ ಹಿಂದೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಇದೆ ಎಂಬುದಾಗಿ ಅಧಿಕಾರಿಗಳು ಆರೋಪಿಸಿದ್ದಾರೆ. ಪಿಕೆಕೆ ಟರ್ಕಿಯ ನಗರಗಳಲ್ಲಿ ಪೊಲೀಸ್ ಠಾಣೆಗಳು ಮತ್ತು ರಸ್ತೆ ಬದಿಗಳಲ್ಲಿರುವ ಪೊಲೀಸ್ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ.

ಇದಾದ ಗಂಟೆಗಳ ಬಳಿಕ, ಗುರುವಾರ ಮುಂಜಾನೆ ಟರ್ಕಿಯ ಪೂರ್ವದ ನಗರ ಎಲಾಝಿಗ್‌ನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇನ್ನೊಂದು ಕಾರ್‌ಬಾಂಬ್ ಸ್ಫೋಟಿಸಿತು. ಈ ಸ್ಫೋಟದಲ್ಲಿ ಕನಿಷ್ಠ ಮೂವರು ಪೊಲೀಸ್ ಅಧಿಕಾರಿಗಳು ಹತರಾದರು ಹಾಗೂ ಸುಮಾರು 100 ಮಂದಿ ಗಾಯಗೊಂಡರು ಎಂದು ಸರಕಾರಿ ಒಡೆತನದ ವಾರ್ತಾಸಂಸ್ಥೆ ಅನಾಡೊಲು ಏಜನ್ಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News