ಆಸಿಯಾನ್ ಸಭೆಯಲ್ಲಿ ಚೀನಾ ಜೊತೆಗಿನ ಸಮುದ್ರ ವಿವಾದ ಎತ್ತುವುದಿಲ್ಲ: ಫಿಲಿಪ್ಪೀನ್ಸ್
ಮನಿಲಾ, ಆ. 18: ಲಾವೋಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಆಗ್ನೇಯ ಏಶ್ಯ ದೇಶಗಳ (ಆಸಿಯಾನ್) ಸಮ್ಮೇಳನದಲ್ಲಿ, ಚೀನಾದೊಂದಿಗೆ ಫಿಲಿಪ್ಪೀನ್ಸ್ ಹೊಂದಿರುವ ಸಾಗರ ಗಡಿ ವಿವಾದವನ್ನು ತಾನು ಪ್ರಸ್ತಾಪಿಸುವುದಿಲ್ಲ ಎಂದು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟೆ ಹೇಳಿದ್ದಾರೆ.
ಈ ವಿಷಯದಲ್ಲಿ ಚೀನಾದೊಂದಿಗೆ ನೇರವಾಗಿ ಮಾತುಕತೆ ನಡೆಸಲು ಫಿಲಿಪ್ಪೀನ್ಸ್ ಇಚ್ಛಿಸಿದೆ ಎಂದು ಡುಟರ್ಟೆ ಬುಧವಾರ ರಾತ್ರಿ ತಿಳಿಸಿದರು.
ಈ ವಿಷಯವನ್ನು ಚೀನಾ ಅಧಿಕಾರಿಗಳೊಂದಿಗೆ ನೇರವಾಗಿ ಪ್ರಸ್ತಾಪಿಸುವುದಾಗಿ ಡುಟರ್ಟೆ ತಿಳಿಸಿದರು. ಈ ವಿಷಯದಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಿದರೆ ಚೀನಾದ ವಿರೋಧ ಕಟ್ಟಿಕೊಳ್ಳಬೇಕಾಗಬಹುದು ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದರು.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಹಕ್ಕು ಸ್ಥಾಪಿಸುತ್ತಿರುವುದನ್ನು ಹಾಗೂ ಅದರ ಆಕ್ರಮಣಕಾರಿ ವರ್ತನೆಗಳನ್ನು ಪ್ರಶ್ನಿಸಿ ಫಿಲಿಪ್ಪೀನ್ಸ್ ಸಲ್ಲಿಸಿದ್ದ ದೂರನ್ನು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯ ಜುಲೈ ತಿಂಗಳಲ್ಲಿ ಪುರಸ್ಕರಿಸಿರುವುದನ್ನು ಸ್ಮರಿಸಬಹುದಾಗಿದೆ. ಫಿಲಿಪ್ಪೀನ್ಸ್ ಪರವಾಗಿ ತೀರ್ಪು ನೀಡಿರುವ ನ್ಯಾಯಾಲಯ, ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂದು ಸಾರಿತ್ತು.
ಫಿಲಿಪ್ಪೀನ್ಸ್‌ಗೆ ಚೀನಾವನ್ನು ಎದುರಿಸಲು ಜಪಾನ್ ನೌಕೆ
ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಚೀನಾವನ್ನು ಎದುರಿಸುವುದಕ್ಕಾಗಿ ಫಿಲಿಪ್ಪೀನ್ಸ್ ಜಪಾನ್‌ನಿಂದ 10 ತಟರಕ್ಷಣಾ ನೌಕೆಗಳನ್ನು ಪಡೆಯಲಿದ್ದು, ಆ ಪೈಕಿ ಒಂದನ್ನು ಗುರುವಾರ ಪಡೆದುಕೊಂಡಿದೆ ಎಂದು ಫಿಲಿಪ್ಪೀನ್ಸ್‌ನ ತಟರಕ್ಷಣಾ ಪಡೆ ಹೇಳಿದೆ. ಉಭಯ ದೇಶಗಳು ಚೀನಾದೊಂದಿಗೆ ಪ್ರತ್ಯೇಕ ಸಾಗರ ಗಡಿ ವಿವಾದಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ, ತಮ್ಮ ನಡುವಿನ ರಕ್ಷಣಾ ಬಾಂಧವ್ಯವನ್ನು ಈ ದೇಶಗಳು ವಿಸ್ತರಿಸಿವೆ. 44 ಮೀಟರ್ ಉದ್ದದ ‘ಬಿಆರ್‌ಪಿ ಟುಬ್ಬಟಾಹ’ ನೌಕೆ ಮನಿಲಾಕ್ಕೆ ಆಗಮಿಸಿದೆ ಎಂದು ಫಿಲಿಪ್ಪೀನ್ಸ್ ತಟರಕ್ಷಣಾ ಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇ ನೌಕೆಯನ್ನು ಶೋಧ ಮತ್ತು ರಕ್ಷಣೆ, ಕಾನೂನು ಅನುಷ್ಠಾನ ಹಾಗೂ ಸಾಗಣೆ ಉದ್ದೇಶಗಳಿಗಾಗಿ ಬಳಸಲಾಗುವುದು ಎಂದು ಫಿಲಿಪ್ಪೀನ್ಸ್ ಕೋಸ್ಟ್ ಗಾರ್ಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.