ಭಯೋತ್ಪಾದನೆಗೂ ನಿರಾಶ್ರಿತರ ಆಗಮನಕ್ಕೂ ಸಂಬಂಧವಿಲ್ಲ: ಮರ್ಕೆಲ್
Update: 2016-08-19 00:07 IST
ಬರ್ಲಿನ್, ಆ. 18: ಕಳೆದ ವರ್ಷ ಜರ್ಮನಿಗೆ ಆಗಮಿಸಿರುವ ನಿರಾಶ್ರಿತರ ಜೊತೆಗೆ ಭಯೋತ್ಪಾದನೆಯೂ ಬಂದಿದೆ ಎಂಬ ಆರೋಪವನ್ನು ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ತಳ್ಳಿಹಾಕಿದ್ದಾರೆ. ‘‘ಐಸಿಸ್ ನಡೆಸುತ್ತಿರುವ ಭಯೋತ್ಪಾದನೆಯು ನಿರಾಶ್ರಿತರ ಜೊತೆಗೆ ಜರ್ಮನಿಗೆ ಬಂದಿಲ್ಲ. ಅದಕ್ಕಿಂತ ಮೊದಲೂ ಇಲ್ಲಿ ಭಯೋತ್ಪಾದನೆಯಿತ್ತು’’ ಎಂದು ಮರ್ಕೆಲ್ ಹೇಳಿರುವುದಾಗಿ ಜರ್ಮನ್ ವಾರ್ತಾ ಸಂಸ್ಥೆ ಡಿಪಿಎ ವರದಿ ಮಾಡಿದೆ. ಮೆಕ್‌ಲನ್‌ಬರ್ಗ್-ವೆಸ್ಟರ್ನ್ ಪೊಮರೇನಿಯದಲ್ಲಿ ಬುಧವಾರ ರಾತ್ರಿ ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಮರ್ಕೆಲ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಲ್ಲಿ ಸೆಪ್ಟಂಬರ್ 4ರಂದು ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಮರ್ಕೆಲ್‌ರ ಕ್ರಿಶ್ಚಿಯನ್ ಡೆಮಾಕ್ರಟ್ಸ್ ಪಕ್ಷ ಬಲಪಂಥೀಯ ‘ಆಲ್ಟರ್ನೇಟಿವ್ ಫಾರ್ ಜರ್ಮನಿ’ ಪಕ್ಷದಿಂದ ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿದೆ.