‘ಗೋರಕ್ಷಕ’ರಿಗೆ ಗುರುತಿನ ಚೀಟಿ
ಗಾಂಧಿ ನಗರ, ಆ.19: ದೇಶಾದ್ಯಂತ ನಕಲಿ ಗೋರಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಸಮಾಜ ವಿರೋಧಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ ಬೆನ್ನಲ್ಲೇ ಈಗ ಗುಜರಾತ್ ಗೋ ಸೇವಾ ಆಯೋಗವು ‘ನೈಜ ಗೋರಕ್ಷಕ’ರಿಗೆ ಗುರುತಿನ ಚೀಟಿ ನೀಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಶೇ. 80 ರಷ್ಟು ನಕಲಿ ಗೋ ರಕ್ಷಕರಿದ್ದು, ಸ್ವಯಂ ಗೋರಕ್ಷಕರು ಗೋ ರಕ್ಷಣೆಯ ಹೆಸರಿನಲ್ಲಿ, ಹಗಲಿನಲ್ಲಿ ಗೋಮಾಂಸದ ಅಂಗಡಿ ತೆರೆದಿಡುತ್ತಾರೆ ಹಾಗೆಯೇ, ರಾತ್ರಿಯಲ್ಲಿ ಕಾರ್ಯಾಚರಣೆ ಮಾಡುತ್ತಾ, ಸಮಾಜ ವಿರೋಧಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದೂ ಮೋದಿ ಹೇಳಿದ್ದರು.
ಬಳಿಕ ಕೇಂದ್ರದ ಮಾಜಿ ಸಚಿವ ಹಾಗೂ ಗೋಸೇವಾ ಆಯೋಗದ ಅಧ್ಯಕ್ಷ ಡಾ. ವಲ್ಲಭ್ ಕತೀರಿಯಾ ಅವರು, ಹೆಸರಾಂತ ಗೋ ಕಲ್ಯಾಣ ಸಂಘ ಸಂಸ್ಥೆಗಳಿಗೆ ಸೇರಿದ ಗೋ ರಕ್ಷಕರಿಗೆ ಇನ್ನುಮುಂದೆ ಅಧಿಕೃತವಾದ ಗುರುತಿನ ಚೀಟಿಯನ್ನು ನೀಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸರಕಾರ ಗೋಶಾಲೆಗಳಿಗೆ ನೆರವನ್ನು ನೀಡುತ್ತಿದ್ದು, ಇಲ್ಲಿ ಸುಮಾರು 500 ಕ್ಕೂ ಹೆಚ್ಚು ಗೋಶಾಲೆಗಳಿವೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಘಟನೆಗಳು ಕಲ್ಯಾಣ ಟ್ರಸ್ಟ್‌ನಲ್ಲಿ ಭಾಗಿಯಾಗಿವೆ. ಇಂತಹ ಸಂಘಟನೆಗಳಿಗೆ ಸೇರಿದವರಿಗೆ ಪೊಲೀಸ್ ಇಲಾಖೆಯು ಪರಿಶೀಲನೆಯನ್ನು ನಡೆಸಿದ ಬಳಿಕ, ಗುರುತಿನ ಚೀಟಿಗಳನ್ನು ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಫೋಟೊ ಕೃಪೆ: catchnews.com