ಒಲಿಂಪಿಕ್ ಚಿನ್ನಕ್ಕೆ ಸಿಂಧೂ ಎದುರಿರುವ ಸವಾಲು ಕರೋಲಿನಾ ಮರಿನ್
ರಿಯೋ ಡಿ ಜನೈರೋ, ಆ.19: ಭಾರತಕ್ಕೆ ತನ್ನ ಚೊಚ್ಚಲ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದುಕೊಡುವರೆಂದು ಕೋಟ್ಯಾಂತರ ಭಾರತೀಯರು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರ ಇಂದಿನ ಫೈನಲ್ ಹಣಾಹಣಿಯನ್ನು ಎದುರು ನೋಡುತ್ತಿದ್ದಾರೆ. ಈ ಅಂತಿಮ ಪಂದ್ಯದಲ್ಲಿ ಸಿಂಧು ವಿಶ್ವದ ನಂ.1 ಆಟಗಾರ್ತಿ ಸ್ಪೇನ್ ದೇಶದ ಕರೋಲಿನಾ ಮರಿನ್ ಅವರಿಂದ ಕಠಿಣ ಸವಾಲನ್ನೆದುರಿಸಲಿದ್ದಾರೆ.
2009ರಲ್ಲಿ ಯುರೋಪಿಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿರುವ ಸಿಂಧು, ನಂತರ 2009ರ ಯುರೋಪಿಯನ್ ಅಂಡರ್ 17 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು. 2013ರಲ್ಲಿ ಲಂಡನ್ ಗ್ರಾಂಡ್ ಪ್ರಿಕ್ಸ್ ಚಿನ್ನ ಪಡೆದ ಅವರು ಈ ಪಂದ್ಯ ಗೆದ್ದ ಸ್ಪೇನ್ ದೇಶದ ಪ್ರಥಮ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ.
ಕರೋಲಿನಾರನ್ನು ಆಕೆಯ ತವರು ದೇಶವಾದ ಸ್ಪೇನ್ ನಲ್ಲಿ ‘ಗರ್ಲ್ ನಡಾಲ್’ ಎಂದು ಕರೆಯುತ್ತಾರೆ. ಎಡಗೈ ಆಟಗಾರ್ತಿಯಾಗಿರುವ ಈಕೆ ಕೋರ್ಟ್ ನಲ್ಲಿರುವಾಗ ಆವೇಶಭರಿತರಾಗಿ ಆಡುತ್ತಾರೆ. ಅತ್ಯಂತ ವೇಗವಾಗಿ ಆಡುವ ಆಕೆಯ ಕೆಲವೊಂದು ತಂತ್ರಗಾರಿಕೆಗಳು ಆಕೆಯನ್ನು ಹಲವು ಆಟಗಳಲ್ಲಿ ಮೇಲುಗೈ ಸಾಧಿಸುವಂತೆ ಮಾಡಿದೆ.
2015 ರಲ್ಲಿ ಆಕೆ ಆಡಿದ ಎಲ್ಲಾ ಪಂದ್ಯಗಳಲ್ಲೂ ವಿಜಯ ಸಾಧಿಸಿದ್ದರೂ ಆಕೆ ಒಲಿಂಪಿಕ್ಸ್‌ಗೆ ತರಬೇತಿ ಪಡೆಯಲು ಆರಂಭಿಸಿದಾಗಿನಿಂದ ಆಕೆ ಬೇರೆ ಯಾವುದೇ ಪಂದ್ಯಗಳಲ್ಲಿ ಭಾಗವಹಿಸಿಲ್ಲ. ಭಾರತದ ಸಿಂಧು ಕರೋಲಿನಾರನ್ನು 2010ರ ಜೂನಿಯರ್ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ಸೋಲಿಸಿದ್ದರಲ್ಲದೆ, ಮಾಲ್ಡೀವ್ಸ್ ಇಂಟರ್‌ನ್ಯಾಷನಲ್ ಚ್ಯಾಲೆಂಜ್ ಪಂದ್ಯದಲ್ಲೂ ಸೋಲಿಸಿದ್ದರು.