ಸಿಂಧೂ ಆಟದ ಹಿಂದಿನ ಚಾಣಾಕ್ಷ ಮೆದುಳು ಪಿ.ಗೋಪಿಚಂದ್ !
ಹೈದರಾಬಾದ್, ಆ.19: ‘‘ಗೋ ಫಾರ್ ಗೋಲ್ಡ್’’ ಹೀಗೆಂದು ಇಡೀ ಭಾರತಕ್ಕೆ ಭಾರತವೇ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ಕರೆಯುತ್ತಿದೆ. ಆದರೆ ಈ ಪ್ರತಿಭಾವಂತ ಆಟಗಾರ್ತಿಯ ಬೆನ್ನೆಲುಬಾಗಿ ಹಾಗೂ ಅವರ ಹಿಂದಿನ ಚಾಣಾಕ್ಷ ಮೆದುಳಾಗಿರುವವರು ಬೇರ್ಯಾರೂ ಅಲ್ಲ, ಅವರ ಕೋಚ್ ಪಿ.ಗೋಪಿಚಂದ್. ಸಿಂಧು ಅವರ ಶಟಲ್ ಆಟದ ಹಿಂದೆ ಗೋಪಿಚಂದ್ ಅವರ ಚದುರಂಗದಾಟದ ತಂತ್ರಗಾರಿಕೆಯಿದೆ.
‘‘ನನ್ನ ಮನಸ್ಸಿನಲ್ಲೊಂದು ಯೋಜನೆಯಿದೆ. ಅದನ್ನು ನಾವು ಕಾರ್ಯರೂಪಕ್ಕೆ ತರಬೇಕು’’ಎಂದು ರಿಯೋದಲ್ಲಿರುವ ಗೋಪಿಚಂದ್ ಹೇಳುತ್ತಾರೆ. ಸಿಂಧು ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ್ತಿ ಸ್ಪೇನ್ ನ ಕರೋಲಿನಾ ಮರಿನ್ ಅವರನ್ನು ಎದುರಿಸಲಿರುವುದರಿಂದ ಗೋಪಿಚಂದ್ ಹಾಗೂ ಸಿಂಧು ಇಬ್ಬರೂ ಮರಿನ್ ಹಾಗೂ ಚೀನಾದ ಲಿ ಕ್ಸುರೆಯೈ ಅವರ ನಡುವೆ ನಡೆದ ಮೊದಲ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದ್ದಾರೆ.
ಗೋಪಿಚಂದ್ ಅವರು ಸಿಂಧುವನ್ನು ಅತ್ಯಂತ ಶಿಸ್ತು ಮತ್ತು ಯೋಜನಾಬದ್ಧ ರೀತಿಯಲ್ಲಿ ತರಬೇತುಗೊಳಿಸಿದ್ದಾರೆ. ಸಿಂಧು ಅವರ ಕಾರ್ಯತಂತ್ರವನ್ನು ಸಿದ್ಧಪಡಿಸಲು ತಾನು ರಿಯೋದಲ್ಲಿ ಹಲವಾರು ನಿದ್ದೆಯಿಲ್ಲದ ರಾತ್ರಿಗಳನ್ನೂ ಕಳೆದಿದ್ದೇನೆ ಎಂದು ಅವರು ಒಪ್ಪಿಕೊಳ್ಳುತ್ತಾರೆ.
ಸಿಂಧು ಅವರು ಅಂಗಣದಲ್ಲಿ ಆಟವಾಡುತ್ತಿದ್ದರೂ ಬ್ಯಾಡ್ಮಿಂಟನ್ ಚೆಸ್ ಬೋರ್ಡ್‌ನಲ್ಲಿ ಆಕೆಯ ಪ್ರತಿಯೊಂದು ಹೆಜ್ಜೆಯನ್ನು ನಿರ್ಧರಿಸುವವರು ಗೋಪಿಚಂದ್ ಆಗಿದ್ದಾರೆ. ಆಕೆ ಅಂಗಣದಲ್ಲಿ ಚೆಕ್‌ಮೇಟ್ ಆಗದಂತೆ ಅವರು ಸರ್ವ ಪ್ರಯತ್ನ ಮಾಡುತ್ತಾರೆ. ಅವರು ಕೇವಲ ತಮ್ಮ ಹುಬ್ಬೇರಿಸಿದರೆ ಅಥವಾ ತಮ್ಮ ಅಂಗೈಯ್ಯನ್ನೆತ್ತಿದರಷ್ಟೇ ಸಾಕು, ತಾವು ಮುಂದೇನು ಮಾಡಬೇಕು ಎಂದು ಸಿಂಧು ಅವರಿಗೆ ಥಟ್ಟನೆ ತಿಳಿದು ಬಿಡುತ್ತದೆ. ‘‘ಗೋಪಿಚಂದ್ ಸರ್ ಅವರು ನೆಟ್ಟ ದೃಷ್ಟಿಯಿಂದ ನೋಡಿದರೆ ಅದು ಸಾವಿರ ಶಬ್ದಗಳಿಗೆ ಸಮ’’ಎಂದು ಬ್ಯಾಡ್ಮಿಂಟನ್ ಅಕಾಡೆಮಿಯ ಯಾರೇ ಆದರೂ ಹೇಳುತ್ತಾರೆ.
ಸಿಂಧು ಅವರ ಹೆತ್ತವರಾದ ಪಿ.ವಿ. ರಮಣ ಹಾಗೂ ಪಿ. ವಿಜಯ ಅವರು ಕೂಡ ವಾಲಿಬಾಲ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದವರು. ತಮ್ಮ ಮಗಳ ಯಶಸ್ಸಿಗೆ ಆಕೆಯ ಕೋಚ್ ಅವರೇ ಸಂಪೂರ್ಣವಾಗಿ ಕಾರಣರೆಂದು ಅವರು ಹೇಳುತ್ತಾರೆ. 2016ರ ಆರಂಭದಿಂದ ಸಿಂಧು ಅವರನ್ನು ತರಬೇತುಗೊಳಿಸುವಲ್ಲಿ ಗೋಪಿಚಂದ್ ಅದೆಷ್ಟು ಶ್ರಮ ಪಟ್ಟಿದ್ದರೆಂದರೆ ಅವರು ಈ ನಡುವೆ 7 ಕೆಜಿ ತೂಕ ಕೂಡ ಕಳೆದುಕೊಂಡಿದ್ದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೇಹ್ವಾಲ್ ಕಂಚಿನ ಪದಕ ಪಡೆದಿದ್ದಾಗ ಗೋಪಿಚಂದ್ ಅವರ ಒಲಿಂಪಿಕ್ ಕನಸು ನನಸಾಗಿತ್ತು. ಇದೀಗ ಅವರು ಸಿಂಧು ಮೂಲಕ ಮತ್ತೊಂದು ಒಲಿಂಪಿಕ್ ಪದಕದ ಕನಸು ಕಾಣುತ್ತಿದ್ದಾರೆ ಹಾಗೂ ಅದು ನಿಜವಾಗಲಿದೆ.