ಸೆ.2ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೋಲ್ ಇಂಡಿಯಾ ಕಾರ್ಮಿಕರ ಕರೆ
ಹೊಸದಿಲ್ಲಿ,ಆ.20: ಕಲ್ಲಿದ್ದಲು ಕ್ಷೇತ್ರದಲ್ಲಿ ಇನ್ನಷ್ಟು ಹೂಡಿಕೆ ಹಿಂದೆಗೆತ ಮತ್ತು ವ್ಯೆಹಾತ್ಮಕ ಮಾರಾಟವನ್ನು ಪ್ರತಿಭಟಿಸಿ ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾದ ನೌಕರರು ಸೆ.2ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಲಿದ್ದಾರೆ.
ಸೆ.2ರಂದು ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನಮಗೆ ಲಭಿಸಿದೆ. ಸಂಧಾನ ಪ್ರಕ್ರಿಯೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಕೋಲ್ ಇಂಡಿಯಾ ತಿಳಿಸಿದೆ.
ನೌಕರರು ಮುಷ್ಕರದಲ್ಲಿ ತೊಡಗಿದರೆ ಅದು ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ ಎಂದು ಅದು ಹೇಳಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಮಿಕ ಒಕ್ಕೂಟಗಳ ಕರೆಯ ಮೇರೆಗೆ ರಾಷ್ಟ್ರಾದ್ಯಂತ ಸುಮಾರು ನಾಲ್ಕು ಲಕ್ಷ ಕಲ್ಲಿದ್ದಲು ಕಾರ್ಮಿಕರು ಮುಷ್ಕರ ನಡೆಸಿದಾಗ ಉತ್ಪಾದನೆಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿತ್ತು.
ಮೋದಿ ಸರಕಾರದ ಜನವಿರೋಧಿ ನೀತಿಗಳು ಮತ್ತು ಏಕಪಕ್ಷೀಯ ಕಾರ್ಮಿಕ ಸುಧಾರಣಾ ಕ್ರಮಗಳನ್ನು ವಿರೋಧಿಸಿ ಪ್ರಮುಖ ಕಾರ್ಮಿಕ ಒಕ್ಕೂಟಗಳು ಸೆ.2ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಅವುಗಳ ಬೇಡಿಕೆಗಳಲ್ಲಿ ಕೋಲ್ ಇಂಡಿಯಾದಿಂದ ಇನ್ನಷ್ಟು ಹೂಡಿಕೆ ಹಿಂದೆಗೆತಕ್ಕೆ ವಿರೋಧವೂ ಸೇರಿದೆ. ಸುಮಾರು ಐದು ಲಕ್ಷ ಬ್ಯಾಂಕ್ ನೌಕರರೂ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.