×
Ad

ಪರರಾಜ್ಯಗಳ ಜೈಲುಗಳಲ್ಲಿರುವ ಕೈದಿಗಳ ಪಟ್ಟಿ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2016-08-20 19:54 IST

ಮದುರೈ,ಆ.20: ತಮ್ಮ ತವರು ರಾಜ್ಯಗಳಿಂದ ಹೊರಗಿನ ಜೈಲುಗಳಲ್ಲಿರುವ ಮತ್ತು ಭಾಷಾ ತೊಡಕನ್ನು ಎದುರಿಸುತ್ತಿರುವ ಕೈದಿಗಳಿಗೆ ಕೊಂಚ ನೆಮ್ಮದಿಯನ್ನು ಕಲ್ಪಿಸಲು ಬಯಸಿರುವ ಮದ್ರಾಸ್ ಉಚ್ಚ ನ್ಯಾಯಾಲಯವು, ಇಂತಹ ಕೈದಿಗಳ ಯಾದಿಯನ್ನು ಆ.26ರೊಳಗೆ ತನಗೆ ಸಲ್ಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡಿದೆ.

ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಒಡಿಶಾದ ಟಿ.ಸುಶಾಂತ ಪ್ರಧಾನ್ ಎಂಬಾತನನ್ನು ಆತನ ತವರು ರಾಜ್ಯದ ಜೈಲಿಗೆ ವರ್ಗಾವಣೆಗೊಳಿಸಿದ ನ್ಯಾ.ಎಸ್.ವಿಮಲಾ ಅವರು, ತಮ್ಮ ರಾಜ್ಯಗಳಿಂದ ಹೊರಗಿನ ರಾಜ್ಯಗಳ ಜೈಲುಗಳಲ್ಲಿ ಇಂತಹುದೇ ಸ್ಥಿತಿಯಲ್ಲಿರುವ ಕೈದಿಗಳಿರಬಹುದು ಎಂದು ಹೇಳಿದರಲ್ಲದೆ, ಸ್ವಯಂಪ್ರೇರಿತ ಕ್ರಮದಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಪೊಲೀಸ್ ಮತ್ತು ಜೈಲು ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಿ ಈ ನಿರ್ದೇಶವನ್ನು ನೀಡಿದರು.

ತನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲೂ ತನಗೆ ಸಾಧ್ಯವಾಗಿರಲಿಲ್ಲ ಎಂದು ಪ್ರಧಾನ್ ತನ್ನ ಅರ್ಜಿಯಲ್ಲಿ ನೋವು ತೋಡಿಕೊಂಡಿದ್ದ.

 ಕೈದಿಗಳು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಮತ್ತು ಸುಧಾರಣೆಯಾಗಬೇಕು ಎಂಬ ಉದ್ದೇಶದಿಂದ ಅವರನ್ನು ಜೈಲುಗಳಲ್ಲಿ ಇರಿಸಲಾಗುತ್ತದೆ. ಕೈದಿಗಳಿಗೆ ತಮ್ಮ ಸಹಕೈದಿಗಳೊಂದಿಗೆ ಮತ್ತು ಕುಟುಂಬ ಸದಸ್ಯರೊಡನೆ ಮಾತನಾಡಲು ಸಾಧ್ಯವಾಗದಿದ್ದರೆ ಅದು ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಹುದು ಎಂದು ನ್ಯಾ.ಎಸ್.ವಿಮಲಾ ಕಳಕಳಿ ವ್ಯಕ್ತಪಡಿಸಿದರು.

ಪ್ರಧಾನ್‌ನಂತಹ ಕೈದಿಗಳು ಇನ್ನೂ ಹಲವರಿರಬಹುದು ಮತ್ತು ಅವರಿಗೆ ಇಂತಹ ಅರ್ಜಿಗಳನ್ನು ಸಲ್ಲಿಸುವ ಸೌಲಭ್ಯಗಳಿಲ್ಲದಿರಬಹುದು ಎಂದ ಅವರು,ಅಂತಹ ಕೈದಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಪರಿಹಾರ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ವಿ.ಆರ್ ಕೃಷ್ಣ ಅಯ್ಯರ್ ಅವರನ್ನು ಉಲ್ಲೇಖಿಸಿದ ಅವರು, ಜೈಲುಗಳಲ್ಲಿ ಕೈದಿಗಳನ್ನು ದಯನೀಯ ಸ್ಥಿತಿಯಲ್ಲಿ ಇರಿಸಲಾಗುತ್ತಿದೆ ಮತ್ತು ಈ ಪರಿಸ್ಥಿತಿ ಬದಲಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News