×
Ad

ಅಪ್ರಾಪ್ತ ವಯಸ್ಕ ಬಾಲಕನಿಂದ ಕಾರು ಚಾಲನೆ : ಹೈಕೋರ್ಟ್‌ನಿಂದ ಕುಟುಂಬಕ್ಕೆ 50,000 ರೂ.ದಂಡ

Update: 2016-08-20 20:23 IST

ಮುಂಬೈ,ಆ.20: ಕಳೆದ ವರ್ಷ ನಗರದಲ್ಲಿ ವಾಹನ ಚಾಲನೆ ಪರವಾನಿಗೆಯಿಲ್ಲದೆ ತನ್ನ ಕುಟುಂಬದ ಕಾರನ್ನು ಚಲಾಯಿಸಿ ಅಪಘಾತವೆಸಗಿದ್ದ ಅಪ್ರಾಪ್ತ ವಯಸ್ಕ ಬಾಲಕನೋರ್ವನ ತಂದೆಗೆ ಬಾಂಬೆ ಉಚ್ಚ ನ್ಯಾಯಾಲಯವು 50,000 ರೂ.ದಂಡವನ್ನು ವಿಧಿಸಿದೆ. ಈ ಅಪಘಾತದಲ್ಲಿ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತಿದ್ದ ಇನ್ನೋರ್ವ ಬಾಲಕ ಗಾಯಗೊಂಡಿದ್ದ.

2015,ನ.14ರಂದು ಬಾಲಕ ಚಲಾಯಿಸುತ್ತಿದ್ದ ಕಾರು ಅಂಧೇರಿ ವರ್ಸೋವಾದ ಲೋಖಂಡವಾಲಾ ಪ್ರದೇಶದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಆತನ ಸೇಹಿತ ಗಾಯಗೊಂಡಿದ್ದು,ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆದರೆ ಬಳಿಕ ಪರಸ್ಪರ ರಾಜಿ ಮಾಡಿಕೊಂಡಿದ್ದ ಇಬ್ಬರೂ ಬಾಲಕರ ಹೆತ್ತವರು ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

  ಸಾಮಾನ್ಯ ಸನ್ನಿವೇಶವಾಗಿದ್ದರೆ ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿ ಯಾವುದೇ ದಂಡವನ್ನು ವಿಧಿಸದೆ ಎಫ್‌ಐಆರ್ ರದ್ದುಗೊಳಿಸಲು ಅವಕಾಶ ನೀಡುತ್ತಿತ್ತು. ಆದರೆ ಈ ಪ್ರಕರಣದಲ್ಲಿನ ಅಂಶಗಳು ಆತಂಕಕಾರಿಯಾಗಿವೆ. ತನ್ನ ಕಾರನ್ನು ಚಲಾಯಿಸಲು ಅಪ್ರಾಪ್ತ ವಯಸ್ಕ ಪುತ್ರನಿಗೆ ನೀಡುವ ಮೂಲಕ ರಾಜೇಶ್ ಧೋಲೆ ತಪ್ಪು ಮಾಡಿದ್ದಾರೆ. ಸಮಾಜಕ್ಕೆ ಕಠಿಣ ಸಂದೇಶವೊಂದು ರವಾನೆಯಾಗಬೇಕೆಂಬ ಪ್ರಾಸಿಕ್ಯೂಷನ್ ವಾದವನ್ನು ನಾವು ಒಪ್ಪುತ್ತೇವೆ. ಅಪಘಾತದಿಂದ ಪಾದಚಾರಿಗಳಿಗೂ ಅಪಾಯವಾಗಬಹುದಿತ್ತು. ಅದೃಷ್ಟವಶಾತ್ ಅಂತಹುದು ಸಂಭವಿಸಿಲ್ಲ ಎಂದು ಹೇಳಿದ ನ್ಯಾ.ನರೇಶ ಪಾಟೀಲ್ ಅವರ ಪೀಠವು,50,000 ರೂ.ದಂಡ ಪಾವತಿಸುವಂತೆ ಧೋಲೆಗೆ ಆದೇಶಿಸಿ,ಎಫ್‌ಐಆರ್ ರದ್ದುಗೊಳಿಸಲು ಅವಕಾಶ ನೀಡಿತು. ದಂಡದ ಹಣವನ್ನು ಎರಡು ವಾರಗಳಲ್ಲಿ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆ ಮತ್ತು ಕ್ಯಾನ್ಸರ್ ಸಂಶೋಧನಾ ಸಂಸ್ಥೆಯಲ್ಲಿ ಠೇವಣಿಯಿರಿಸುವಂತೆ ಅದು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News