×
Ad

ಅಫ್ಘಾನ್: ಇನ್ನೊಂದು ಜಿಲ್ಲೆ ತಾಲಿಬಾನ್ ಸುಪರ್ದಿಗೆ

Update: 2016-08-20 20:26 IST

ಅಫ್ಘಾನ್‌ಕಾಬೂಲ್, ಆ. 20: ಅಫ್ಘಾನಿಸ್ತಾನದ ಕುಂಡುಝ್ ಪ್ರಾಂತದ ಜಿಲ್ಲೆಯೊಂದನ್ನು ತಾಲಿಬಾನ್ ಶನಿವಾರ ವಶಪಡಿಸಿಕೊಂಡಿದೆ. ಇದೇ ಪ್ರಾಂತದ ರಾಜಧಾನಿಯನ್ನು ಬಂಡುಕೋರರು ಕಳೆದ ವರ್ಷ ಸ್ವಲ್ಪ ಸಮಯ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಬಳಿಕ ಸರಕಾರಿ ಪಡೆಗಳು ತಾಲಿಬಾನಿಗಳನ್ನು ಹೊಡೆದೋಡಿಸಿದ್ದರು.

ಖಾನ್ ಅಬಾದ್‌ನಲ್ಲಿರುವ ಜಿಲ್ಲಾ ಪ್ರಧಾನ ಕಚೇರಿ ಮೇಲೆ ಬಂಡುಕೋರರು ವಿವಿಧ ದಿಕ್ಕುಗಳಿಂದ ದಾಳಿ ಮಾಡಿದರು ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ವಕ್ತಾರ ಮುಹಮ್ಮದುಲ್ಲಾ ಬಹೇಜ್ ಸುದ್ದಿಗಾರರಿಗೆ ತಿಳಿಸಿದರು.

 ಜಿಲ್ಲೆಯನ್ನು ಮರುವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಲು ಭದ್ರತಾ ಪಡೆಗಳು ಯೋಜನೆ ರೂಪಿಸುತ್ತಿವೆ ಎಂದರು.

ಶಸ್ತ್ರಾಸ್ತ್ರಗಳು ಮತ್ತು ಸೇನಾ ವಾಹನಗಳೊಂದಿಗೆ ಇಡೀ ಜಿಲ್ಲೆಯನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂದು ಅದರ ವಕ್ತಾರನೊಬ್ಬನು ತಿಳಿಸಿದನು.

ನೂರಾರು ನಾಗರಿಕರು ನಗರದಿಂದ ಪಲಾಯನಗೈದಿದ್ದಾರೆ ಎಂದು ಕುಂಡುಝ್ ಪ್ರಾಂತೀಯ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂಸುಫ್ ಅಯೂಬ್ ತಿಳಿಸಿದರು. ‘‘ಕೇಂದ್ರ ಸರಕಾರ ಇದರತ್ತ ಗಮನ ಹರಿಸದಿದ್ದರೆ ಕಳೆದ ವರ್ಷದಂತೆ ಈ ಬಾರಿಯೂ ತಾಲಿಬಾನ್ ಕುಂಡುಝ್ ಪ್ರಾಂತವನ್ನು ವಶಪಡಿಸಿಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದರು.

ಕಳೆದ ವಾರ ತಾಲಿಬಾನ್ ಬಘ್ಲನ್ ಪ್ರಾಂತದ ಜಿಲ್ಲೆಯೊಂದನ್ನು ವಶಪಡಿಸಿಕೊಂಡಿರುವುದನ್ನು ಸ್ಮರಿಸಬಹುದು. ಇತರ ಪ್ರಾಂತಗಳಲ್ಲಿಯೂ ಬಂಡುಕೋರರು ಮತ್ತು ಸರಕಾರಿ ಪಡೆಗಳ ನಡುವೆ ಭಾರೀ ಸಂಘರ್ಷ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News