×
Ad

ಭಯ ಮತ್ತು ಅವಮಾನ ಮುಕ್ತ ಬದುಕಿನ ನಿರೀಕ್ಷೆಯಲ್ಲಿ ಗುಜರಾತ್ ದಲಿತ ಮಹಿಳೆಯರು

Update: 2016-08-20 22:42 IST

ಗುಜರಾತ್‌ನ ದಲಿತ ಪುರುಷರು ಸತ್ತ ಪ್ರಾಣಿಗಳ ಚರ್ಮ ಸುಲಿಯುವ ಕೆಲಸವನ್ನು ತ್ಯಜಿಸುತ್ತಿದ್ದರೆ, ಅಲ್ಲಿನ ಮಹಿಳೆಯರು ಸಂಸಾರದ ನೊಗವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಗ್ರಾಮೀಣ ಗುಜರಾತ್‌ನ ಈ ಮಹಿಳೆಯರು ಕೇವಲ ರ್ಯಾಲಿಗಳಲ್ಲಿ ಪುರುಷರ ಹೆಗಲಿಗೆ ಹೆಗಲು ನೀಡಿ ನಿಲ್ಲಲು ಮನೆಯಿಂದ ಹೊರಗೆ ಬಂದಿಲ್ಲ ಬದಲಿಗೆ ತಮ್ಮ ಅಸ್ಮಿತೆಯ ಹೋರಾಟದ ಜೊತೆಗೆ ಗೃಹಿಣಿಯ ಪಾತ್ರವನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ.

ಆಗಸ್ಟ್ 5ರಂದು ದಲಿತ ಅಸ್ಮಿತ ಯಾತ್ರೆಯು ಅಹ್ಮದಾಬಾದ್‌ನಿಂದ ಆರಂಭವಾದಾಗ ಇಬ್ಬರು ಮಹಿಳೆಯರಾದ ಅಹ್ಮದಾಬಾದ್ ಮೂಲದ ಕಾರ್ಯಕರ್ತೆ ಮತ್ತು ದಲಿತ ಮೆರವಣಿಗೆಯ ಸಂಘಟಕರಲ್ಲಿ ಒಬ್ಬರಾದ ನಿರ್ಜರಿ ಸಿನ್ಹಾ ಮತ್ತು ಇನ್ನೊಬ್ಬ ಕಾರ್ಯಕರ್ತೆ ಭಾವನಾ ರಮ್ರಖಿಯಾನಿ ಪುರುಷರ ಜೊತೆ ಹೆಜ್ಜೆ ಹಾಕಿದ್ದರು. ರ್ಯಾಲಿಯು ಗುಜರಾತ್‌ನ ಹಳ್ಳಿಗಳನ್ನು ಹಾದುಹೋಗುತ್ತಿದ್ದಂತೆ ದಲಿತ ಮಹಿಳೆಯರು ತಮ್ಮ ಬೆಂಬಲವನ್ನು ಸೂಚಿಸಿದರು, ಸಂಘಟಕರನ್ನು ಭೇಟಿ ಮಾಡಿದರು ಮತ್ತು ತಮ್ಮ ಸಮಸ್ಯೆಯನ್ನು ತೋಡಿಕೊಂಡರು. ಆಗಸ್ಟ್ 15ರಂದು ರ್ಯಾಲಿಯು ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿರುವ ಉನಾ ತಲುಪಿದಾಗ ಮಹಿಳೆಯರ ಭಾಗವಹಿಸುವಿಕೆ ಹಲವು ಪಟ್ಟು ಹೆಚ್ಚಾಗಿತ್ತು. ಲಿಂಗಾಧಾರಿತ ಕೆಲಸವಾಗಿರುವ ಮನೆಕೆಲಸವನ್ನೂ ಹೊಂದಾಣಿಕೆ ಮಾಡಿಕೊಂಡು ಮೂರು ಮಕ್ಕಳ ತಾಯಿ ಮಂಜುಬೇನ್ ಕಾನುಬಾಯಿ ಪರ್ಮರ್ ಬರ್ವರಾ ಹಳ್ಳಿಯಲ್ಲಿ ಎರಡನೇ ದಿನದ ರ್ಯಾಲಿಯಲ್ಲಿ ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ‘‘ಉನಾದ ಘಟನೆ ಬಗ್ಗೆ ತಿಳಿಯಿತು. ನಮ್ಮ ಹಳ್ಳಿಯಲ್ಲಿ ಪರಿಸ್ಥಿತಿ ಸ್ವಲ್ಪಚೆನ್ನಾಗಿದೆ. ಇಲ್ಲಿ ಮೇಲ್ವರ್ಗದವರಿಗಿಂತ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.’’ ಎಂದ ಅವರು
‘‘ನಾನು ಮನೆಗೆ ಹೋಗಬೇಕು’’ ಎಂದು ನನ್ನಲ್ಲಿ ಹೇಳಿ ‘‘ನನ್ನ ಮನೆಯವರಿಗೆ ಅಡುಗೆ ಮಾಡಬೇಕಿದೆ’’ ಎನ್ನುತ್ತಾ ಹೊರಟರು.

ಮನೆ ಮತ್ತು ಸಕಾರಣಕ್ಕಾಗಿ ಪ್ರತಿಭಟಿಸುವ ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳುವ ಈ ಹೋರಾಟದಲ್ಲಿ ಪರ್ಮರ್ ಏಕಾಂಗಿಯಲ್ಲ. ರ್ಯಾಲಿಯು ಸಾಗಿದ ಪ್ರತೀ ಹಳ್ಳಿಯ ಮಹಿಳೆಯರು ಬಹುದೊಡ್ಡ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಬಂದು ರ್ಯಾಲಿಯಲ್ಲಿ ಭಾಗವಹಿಸುವ ಜನರಿಗೆ ಆಹಾರದ ಮತ್ತು ಸ್ವಚ್ಛತೆಯ ವ್ಯವಸ್ಥೆಯನ್ನು ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

ಜವರಾಜ್ ಹಳ್ಳಿಯಲ್ಲಿ ಮೂರನೇ ದಿನದ ರ್ಯಾಲಿಯಲ್ಲಿ ಸುಮಾರು 50 ದಲಿತ ಮಹಿಳೆಯರು ಭಾಗವಹಿಸಿದ್ದರು. ಸೀರೆಯ ಅಂಚಿನಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದ ‘‘ಜೈ ಭೀಮ್’’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಉನಾ ಘಟನೆ ನಡೆದಂದಿನಿಂದ ಮೂವತ್ತನಾಲ್ಕರ ಹರೆಯದ ರಾಜುಬೇನ್ ತಮ್ಮ ಕುಟುಂಬದ ಬಗ್ಗೆ ಚಿಂತಿತರಾಗಿದ್ದಾರೆ. ‘‘ಉನಾ ಘಟನೆಗೂ ಕೆಲವು ವಾರಗಳ ಮೊದಲು ರಜುಲಾದಲ್ಲಿ ಅದೇ ಕಾರಣಕ್ಕಾಗಿ ಏಳು ದಲಿತರಿಗೆ ಥಳಿಸಲಾಗಿತ್ತು, ಆದರೆ ಇದು ಪೊಲೀಸ್ ಠಾಣೆಯಲ್ಲಿ ಮಾತ್ರ ವರದಿಯಾಗಿರಲಿಲ್ಲ’’ ಎಂದಾಕೆ ಹೇಳುತ್ತಾರೆ. ‘‘ಇದು ನನ್ನ ಹಳ್ಳಿ-ನನ್ನ ಮನೆ-ಆದರೂ ನಾನು ಸುರಕ್ಷಿತ ಎಂದು ಭಾವಿಸುತ್ತಿಲ್ಲ. ದಲಿತರು ಮೇಲ್ವರ್ಗದ ಜನರ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ, ಹಾಗೆಯೇ ಕೊನೆಯದೂ ಕೂಡಾ ಅಲ್ಲ’’ ಎಂದಾಕೆ ಹೇಳುತ್ತಾ ಮೌನವಾಗುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಪಕ್ಷಪಾತಕ್ಕೆ ದಲಿತ ಮಹಿಳೆಯರು ಮುಖ್ಯ ಗುರಿಯಾಗಿದ್ದಾರೆ. ಇದಕ್ಕೊಂದು ಉದಾಹರಣೆಯೆಂದರೆ 2013ರಲ್ಲಿ ಅಮ್ರೆಲಿಯಲ್ಲಿ ನಡೆದ ಘಟನೆ, ಅಲ್ಲಿ ಲಾಟಿ ತಾಲೂಕಿನ ಹಿರಾನಾ ಹಳ್ಳಿಯ 17ರ ಹರೆಯದ ಯುವತಿಯನ್ನು ಸಾಮಾಹಿಕ ಅತ್ಯಾಚಾರ ನಡೆಸಿದ ನಂತರ ದಾಸ ಗ್ರಾಮದ ಸಮೀಪ ಎಸೆಯಲಾಗಿತ್ತು. ಅದೂ ಸಾಲದೆಂಬಂತೆ ಹದಿಹರೆಯದ ಆ ಸಂತ್ರಸ್ತೆ ಮತ್ತಾಕೆಯ ತಾಯಿ ಮತ್ತೆ ಪೊಲೀಸರ ಕೈಯಲ್ಲಿ ದೌರ್ಜನ್ಯಕ್ಕೊಳಗಾದರು. ಠಾಣಾಧಿಕಾರಿ ಎಫ್‌ಐಆರ್ ದಾಖಲಿಸುವ ಬದಲು ಅತ್ಯಾಚಾರಿಯ ಜೊತೆಗೆ ಅಪ್ರಾಪ್ತ ಬಾಲಕಿ ವಿವಾಹವಾಗುವಂತೆ ಒತ್ತಡ ಹೇರಿದ್ದ.

ಇದೇ ಜಿಲ್ಲೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ದಲಿತ ಕುಟುಂಬವೊಂದು ತಮ್ಮ ಕುಟುಂಬದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಲೆಕ್ಟರ್ ಕಚೇರಿಯ ಎದುರು ನಾಲ್ಕು ತಿಂಗಳಿನಿಂದ ಧರಣಿ ನಡೆಸುತ್ತಿದ್ದರೂ ಯಾವುದೇ ಫಲ ನೀಡಲಿಲ್ಲ. ಪ್ರತಿಯೊಂದು ಹಳ್ಳಿಯಲ್ಲಿಯೂ ದಲಿತ ಮಹಿಳೆಯರು ಭಯ ಮತ್ತು ಅವಮಾನದಿಂದ ಕೂಡಿದ ಜೀವನದ ಮತ್ತು ಮೇಲ್ವರ್ಗದ ಪುರುಷರಿಂದ ಅವರು ಯಾವ ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂಬ ಬಗ್ಗೆ ಹೇಳಲು ಸಾಕಷ್ಟು ಭಯಾನಕ ಕತೆಗಳಿವೆ. ತನ್ನ ಗಂಡ ಮೃತ ಪ್ರಾಣಿಗಳ ಚರ್ಮ ಸುಲಿಯುವ ಕೆಲಸವನ್ನು ತ್ಯಜಿಸಿದ ನಂತರ ಲಕ್ಷ್ಮೀಬೇನ್ ತಾನೇ ಕೆಲವು ಮನೆಗಳಲ್ಲಿ ಕೆಲಸ ಮಾಡಿ ಕುಟುಂಬ ಪೋಷಿಸುತ್ತಿದ್ದಾಳೆ. ಆಗಸ್ಟ್ 15ರಂದು ಉನಾದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಲು ಆಕೆ ತನ್ನ ಕೆಲಸಕ್ಕೆ ರಜೆ ಹಾಕಿದ್ದಳು. ‘‘ನಾನೊಬ್ಬನ ಕೈಯಲ್ಲಿ ಹಲವು ಬಾರಿ ಕಿರುಕುಳಕ್ಕೆ ಗುರಿಯಾಗಿದ್ದೇನೆ’’ ಎಂದು ಹೇಳುವ ಆಕೆ ಆತನ ಹೆಸರನ್ನು ಹೇಳಲು ನಿರಾಕರಿಸುತ್ತಾ ‘‘ಆತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಮತ್ತು ಅದೇ ಹಳ್ಳಿಯವ’’ ಎಂದಷ್ಟೇ ಹೇಳಿಕೊಂಡಿದ್ದಳು. ‘‘ಆತ ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡುತ್ತಿದ್ದ. ನಾನು ಈ ಬಗ್ಗೆ ನನ್ನ ಪತಿಯಲ್ಲಿ ತಿಳಿಸಿದ್ದೇನೆ ಆದರೆ ಅವರಿಗೂ ಸುಮ್ಮನಿರುವಂತೆ ತಾಕೀತು ಮಾಡಿದ್ದೇನೆ. ನನ್ನ ಗಂಡ ಪ್ರತಿಭಟನೆ ನಡೆಸಿದರೆ ಅವರು ನನ್ನ ಗಂಡನ ಹಿಂದೆ ಬೀಳುತ್ತಾರೆ’’ ಎನ್ನುತ್ತಾಳೆ ತಾಂಗಡ್ ನಿವಾಸಿ ಲಕ್ಷ್ಮೀಬೇನ್.

ಕೆಲವು ಗ್ರಾಮಗಳಲ್ಲಿ ದಲಿತರ ಮನೆಗಳಲ್ಲಿ ಶೌಚಾಲಯಗಳಿಲ್ಲ. ಈ ಸಂದರ್ಭದಲ್ಲಿ ಮಹಿಳೆಯರು 10-15 ಮನೆಯ ಜನರು ಉಪಯೋಗಿಸುವ ಒಂದೇ ಶೌಚಾಲಯವನ್ನು ಅವಲಂಬಿಸಬೇಕಾಗುತ್ತದೆ. ಆದರೆ ಈ ಸಮುದಾಯ ಶೌಚಾಲಯಗಳಿಗೂ ರಾತ್ರಿಯಲ್ಲಿ ಮಹಿಳೆಯರು ಹೋಗಲು ಹೆದರುತ್ತಾರೆ, ಅತ್ಯಾಚಾರ ಅಥವಾ ಕಿರುಕುಳಕ್ಕೆ ಒಳಗಾಗುತ್ತಾರೆ ಎನ್ನುವ ಕಾರಣದಿಂದ. ‘‘ಸಮುದಾಯ ಶೌಚಾಲಯ ನಮ್ಮ ಮನೆಯಿಂದ ಸ್ವಲ್ಪದೂರವಿದೆ. ರಾತ್ರಿಯ ಸಮಯ ನಾವು ಅಲ್ಲಿಗೆ ಗುಂಪಿನಲ್ಲಿ ಹೋಗುತ್ತೇವೆ’’ ಎಂದು ಹೇಳುತ್ತಾರೆ ಸಂತೇರ್ ಹಳ್ಳಿಯ ನಿವಾಸಿ ಸಂತಿಬೇನ್ ಚಂಚೆರ್‌ಬಾಯಿ ರಾಥೋಡ್. ರ್ಯಾಲಿಯಲ್ಲಿ ಯಾಕೆ ಭಾಗವಹಿಸುತ್ತಿದ್ದೀರಿ ಎಂದು ಕೇಳಿದರೆ, ‘‘ಇನ್ನೆಷ್ಟು ಸಹಿಸಲು ಸಾಧ್ಯ’’ ಎಂದಾಕೆ ಉತ್ತರಿಸುತ್ತಾರೆ. ‘‘ಇವರು ನಮ್ಮನ್ನು ಹೀಯಾಳಿಸುತ್ತಾರೆ ಮತ್ತು ನಮ್ಮ ಪುರುಷರು ಪ್ರತಿಭಟಿಸಿದರೆ ಅವರನ್ನು ಥಳಿಸುತ್ತಾರೆ. ಅವರು ನಮ್ಮ ಗಂಡು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಾರೆ ಮತ್ತು ನಮ್ಮ ಪುರುಷರು ಉದ್ಯೋಗ ಕಳೆದುಕೊಳ್ಳುವಂತೆ ಮಾಡುತ್ತಾರೆ’’ ಎನ್ನುತ್ತಾರವರು.

ದಲಿತ ರ್ಯಾಲಿಯು ಉನಾದತ್ತ ಚಲಿಸುತ್ತಿದ್ದಂತೆ ಮಹಿಳೆಯರು ತಮಗಾಗಿ, ತಮ್ಮ ಮಕ್ಕಳಿಗಾಗಿ ಮತ್ತು ಮನೆಗಾಗಿ ಅದನ್ನು ಸೇರಿಕೊಂಡರು. ‘‘ಮೇಲ್ವರ್ಗದ ಪ್ರಾಬಲ್ಯವನ್ನು ಕೊನೆಗಾಣಿಸಬೇಕಿದೆ. ದಲಿತರಿಗೆ ಸಮಾನ ಸಾಮಾಜಿಕ ಸ್ಥಾನಮಾನ, ಜಮೀನಿನ ಮೇಲೆ ಅವರ ಹಕ್ಕು, ಶಿಕ್ಷಣದ ಹಕ್ಕ್ಕು ಮತ್ತು ಒಂದು ಉತ್ತಮ ಜೀವನವನ್ನು ನಾವು ಬಯಸುತ್ತಿದ್ದೇವೆ. ಮಹಿಳೆಯರು ಕೂಡಾ ಇದೇ ಸಮಾಜದ ಭಾಗ. ಸಂಪೂರ್ಣ ಚಿತ್ರಣ ಬದಲಾದಾಗ ಮಹಿಳೆಯರ ಪರಿಸ್ಥಿತಿಯೂ ಉತ್ತಮಗೊಳ್ಳುತ್ತದೆ’’ ಎನ್ನುವುದು ಅವರ ಆಶಾ ಭಾವನೆಯಾಗಿದೆ.

ದಿನಕಳೆದಂತೆ ಹಲವು ಸಂಘ ಸಂಸ್ಥೆಗಳ ಮಹಿಳಾ ನಾಯಕಿಯರು ಮತ್ತು ಕಾರ್ಯಕರ್ತೆಯರು ರ್ಯಾಲಿಯನ್ನು ಸೇರಿಕೊಂಡರು. ಧೀರತನದಿಂದ ಮುನ್ನುಗ್ಗಿದ ಮಹಿಳೆಯರು ಎದೆಗುಂದದೆ ಮುಂದೆ ಸಾಗಿದರು. ‘‘ನಾವು ಜಾತಿವಾದದಿಂದ, ಬ್ರಾಹ್ಮಣವಾದದಿಂದ, ಭೇದಭಾವದಿಂದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತೇವೆ’’ ಜವರಾಜ್ ಹಳ್ಳಿಯಲ್ಲಿ ಈ ಘೋಷಣೆಗಳನ್ನು ಕೂಗುತ್ತಾ ಮಹಿಳೆಯರು ತಮ್ಮ ಹೋರಾಟದ ಕಿಚ್ಚನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ.

Writer - ದಮಯಂತಿ ಧಾರ್

contributor

Editor - ದಮಯಂತಿ ಧಾರ್

contributor

Similar News