ಇಂದು ಯೋಗೇಶ್ವರ್ ದತ್ತ ಅಖಾಡಕ್ಕೆ
ರಿಯೋಡಿಜನೈರೊ, ಆ.20: ಭಾರತದ ಹಿರಿಯ ಕುಸ್ತಿಪಟು ಯೋಗೇಶ್ವರ್ ದತ್ತ ಒಲಿಂಪಿಕ್ಸ್‌ನ ಕೊನೆಯ ದಿನವಾದ ರವಿವಾರ ಕುಸ್ತಿ ಅಖಾಡಕ್ಕೆ ಇಳಿಯಲಿದ್ದು, ದತ್ತ್ ಮೇಲೆ ಪದಕದ ಭರವಸೆ ಇಡಲಾಗಿದೆ.
ನಾಲ್ಕನೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಹರ್ಯಾಣದ ದತ್ತ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ 60 ಕೆಜಿ ಫ್ರಿಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು. ರವಿವಾರ ಪುರುಷರ 65 ಕೆಜಿ ತೂಕ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2015ರಲ್ಲಿ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ದತ್ತ್ ಬೇಗನೆ ಚೇತರಿಸಿಕೊಂಡು ಈ ವರ್ಷ ರಿಯೋ ಗೇಮ್ಸ್‌ಗೆ ಅರ್ಹತೆ ಪಡೆಯಲು ಸಫಲರಾಗಿದ್ದರು. ದತ್ತ್ ಒಲಿಂಪಿಕ್ಸ್‌ನಲ್ಲಿ ಸತತ 2ನೆ ಪದಕ ಜಯಿಸಿ ಕುಸ್ತಿಗೆ ವಿದಾಯ ಹೇಳುವ ಯೋಜನೆ ಹಾಕಿಕೊಂಡಿದ್ದಾರೆ.
33ರ ಪ್ರಾಯದ ದತ್ತ್ ರವಿವಾರದ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಇಟಲಿಯ ಫ್ರಾಂಕ್ ಚಾಮಿರೊ ಹಾಗೂ ರಶ್ಯದ ಸೊಸ್ಲಾನ್ ರಾಮೊನೊವ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.
ಸಹ ಕುಸ್ತಿಪಟು ನರಸಿಂಗ್ ಸಿಂಗ್ ಯಾದವ್ ಡೋಪಿಂಗ್ ಬಲೆಗೆ ಸಿಲುಕಿ ಒಲಿಂಪಿಕ್ಸ್‌ನಲ್ಲಿ ಆಡಲು ಅನರ್ಹರಾಗಿದ್ದಾರೆ. ಈ ಬೆಳವಣಿಗೆ ತನ್ನ ಪ್ರದರ್ಶನದ ಮೇಲೆ ಪರಿಣಾಮಬೀರದು ಎಂದು ದತ್ತ ಹೇಳಿದ್ದಾರೆ.