ಚರ್ಮದ ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೆ ’ಗೋರಕ್ಷಕರ’ ಕಿರುಕುಳ, ಬೆದರಿಕೆ!

Update: 2016-08-21 03:43 GMT

ಮುಂಬೈ, ಆ.21: ಮಹಾನಗರದಲ್ಲಿ ಗೋರಕ್ಷಕರ ಕಿರುಕುಳ ಮಿತಿಮೀರುತ್ತಿದೆ. ಅದು ಹಸುವಿನ ಚರ್ಮ ಸುಲಿಯುತ್ತಿರುವವರ ವಿರುದ್ಧವಲ್ಲ ಅಥವಾ ಗೋಮಾಂಸ ಹೊಂದಿದ ಕಾರಣಕ್ಕಲ್ಲ. ಚರ್ಮದ ಚೀಲವನ್ನು ಹಿಡಿದುಕೊಂಡು ಹೋಗುವುದು ಕೂಡಾ ಇಲ್ಲಿ ಅಪರಾಧವಾಗಿಬಿಟ್ಟಿದೆ. ಎಲ್ಲ ಚರ್ಮದ ಉತ್ಪನ್ನಗಳೂ ದನದ ತೊಗಲಿನಿಂದಲೇ ಮಾಡಲ್ಪಟ್ಟವು ಎಂಬ ಭ್ರಮೆಯಿಂದ!

ಪ್ರಮುಖ ನಿರ್ಮಾಣ ಸಂಸ್ಥೆ ಕ್ರಿಯೇಟಿವ್ ಡೈರೆಕ್ಟರ್ ಒಬ್ಬರು ಚರ್ಮದ ಚೀಲ ಹಿಡಿದುಕೊಂಡು ಶುಕ್ರವಾರ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಆಟೊರಿಕ್ಷಾದಲ್ಲಿ ತೆರಳುತ್ತಿದ್ದಾಗ, ಸ್ವಯಂಘೋಷಿತ ಗೋರಕ್ಷಕರ ಗುಂಪುಂದು ಅವರಿಗೆ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬರಣ್ ಕಶ್ಯಪ್ ಅವರ ಫೇಸ್‌ಬುಕ್ ಪೋಸ್ಟ್ ಇದನ್ನು ವಿವರಿಸಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂಥ ಗೂಂಡಾಗಿರಿಗೆ ಮಹಾನಗರದಲ್ಲಿ ಅವಕಾಶವಿಲ್ಲ ಎಂದು ಮುಂಬೈಗರು ಪ್ರತಿಕ್ರಿಯಿಸಿದ್ದಾರೆ. ಕಿರುಕುಳಕ್ಕೆ ಒಳಗಾದ ಕಶ್ಯಪ್ ಶನಿವಾರ ಠಾಣೆಗೆ ತೆರಳಿ ಮೂವರ ವಿರುದ್ಧ ನಾನ್ ಕಾಗ್ನಿಸಿಬಲ್ ಪ್ರಕರಣ ದಾಖಲಿಸಿದ್ದಾರೆ. ಏಕೆಂದರೆ ಕಶ್ಯಪ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿಲ್ಲ.

ಶುಕ್ರವಾರ ಪೂರ್ವಾಹ್ನ 11:30 ಸುಮಾರಿಗೆ ಕಶ್ಯಪ್ ಆಟೊರಿಕ್ಷಾದಲ್ಲಿ ಬ್ಯಾಂಕಿಗೆ ಹೋಗುತ್ತಿದ್ದಾಗ, ಆಟೊ ಚಾಲಕ ಕುಶಲೋಪರಿ ಮಾತನಾಡುತ್ತಾ, ನಿಮ್ಮ ಚರ್ಮದ ಚೀಲ ವಾಸನೆ ಬರುತ್ತಿದೆ ಎಂದ. ಮಳೆಗಾಲವಾದ್ದರಿಂದ ಹಾಗಾಗಿರಬೇಕು ಎಂದು ಸಬೂಬು ನೀಡಿದರು. ಆತ ಬ್ಯಾಗ್ ಮುಟ್ಟಿನೋಡಿ ಇದು ಹಸುವಿನ ಚರ್ಮದಿಂದ ಮಾಡಿದ್ದು ಎಂದು ಹೇಳಿದ. ಅಲ್ಲ ಒಂಟೆ ಚರ್ಮದ ಬ್ಯಾಗ್ ಎಂದು ಕಶ್ಯಪ್ ಹೇಳಿಕೊಂಡರು. ಆಗ ವಾಗ್ವಾದಕ್ಕೆ ಇಳಿದ ಎಂದು ಹೇಳಲಾಗಿದೆ.

"ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಕೆಲವರಿಗೆ ಸಂಕೇತ ನೀಡಿದ ಆಟೊ ಚಾಲಕ ಆಟೊ ನಿಲ್ಲಿಸಿದ. ಒಬ್ಬ ವ್ಯಕ್ತಿ ಬಂದು ಬ್ಯಾಗ್ ಪರಿಶೀಲಿಸಿದ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಟೊ ಚಾಲಕ ವಾಹನ ಚಲಾಯಿಸಿಕೊಂಡು ಹೊರಟ. ನಾನು ಆಟೊ ನಂಬರ್‌ಪ್ಲೇಟ್ ನೋಡುತ್ತಿದ್ದಾಗ, ಇಂದು ನೀವು ಬಚಾವ್ ಆಗಿದ್ದೀರಿ ಎಂದು ಹೇಳಿದ" ಎಂದು ಕಶ್ಯಪ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News