ದೇಶಾದ್ಯಂತ 10 ಲಕ್ಷ ಶಿಕ್ಷಕರ ಹುದ್ದೆ ಖಾಲಿ: ಕೇಂದ್ರ

Update: 2016-08-21 03:46 GMT

ಬರೇಲಿ, ಆ.21: ದೇಶಾದ್ಯಂತ ಶಾಲಾ ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 8- 10 ಲಕ್ಷ ಶಿಕ್ಷಕ/ ಬೋಧಕ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ.

ಈ ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳಲಿದೆ. 1976ರಿಂದ ಪರಿಷ್ಕರಣೆಗೊಳ್ಳದ ಶಿಕ್ಷಣ ನೀತಿಯಲ್ಲಿ ಅಗತ್ಯ ಸುಧಾರಣೆ ತರಲು ಕೇಂದ್ರ ಸರಕಾರ ಬದ್ಧವಾಗಿದ್ದು, ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಅವರು ಪ್ರಕಟಿಸಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಸಮಾರಂಭಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಹಲವು ವರ್ಷಗಳಿಂದ ಬಹಳಷ್ಟು ಶಿಕ್ಷಕ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳಲಿದೆ. ದೇಶಾದ್ಯಂತ ಸುಮಾರು 10 ಸಾವಿರ ಶಿಕ್ಷಕ/ ಉಪನ್ಯಾಸಕರ ಕೊರತೆ ಇದೆ ಎನ್ನುವುದು ಗಮನಕ್ಕೆ ಬಂದಿದೆ" ಎಂದು ವಿವರಿಸಿದರು.

ಶಿಕ್ಷಣ ನೀತಿಯ ಸಮಗ್ರ ಬದಲಾವಣೆಯ ಸುಳಿವು ನೀಡಿದ ಸಚಿವರು, "ದೇಶದಲ್ಲಿ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. 1962ರಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಶಿಕ್ಷಣ ನೀತಿಯನ್ನು 1976ರಲ್ಲಿ ಪರಿಷ್ಕರಿಸಲಾಗಿದೆ. ಮುಂದೆಂದೂ ಪರಿಷ್ಕರಣೆಯಾಗಿಲ್ಲ. ಹೊಸ ಶಿಕ್ಷಣ ನೀತಿ ಸಿದ್ಧಪಡಿಸುವ ನಿಟ್ಟಿನಲ್ಲಿ ನಾವು ಸಲಹೆ ಪಡೆಯಲು ಮುಂದಾಗಿದ್ದೇವೆ" ಎಂದರು.

ವಿಶ್ವವಿದ್ಯಾನಿಲಯಗಳಿಗೆ ಸಂಲಗ್ನತ್ವ ಹೊಂದಿರುವ ಕಾಲೇಜುಗಳ ಸಂಖ್ಯೆ ಹೆಚ್ಚಿರುವುದರಿಂದ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡುವುದು ಸಾಧ್ಯವಾಗುತ್ತಿಲ್ಲ ಎಂದು ಗಮನ ಸೆಳೆದಾಗ, ವಿಶ್ವವಿದ್ಯಾನಿಲಯಗಳಿಗೆ ಸಂಲಗ್ನತ್ವ ಹೊಂದಿರುವ ಕಾಲೇಜುಗಳ ಸಂಖ್ಯೆಯನ್ನು ನಿಗದಿಪಡಿಸುವುದು ಕೂಡಾ ಕಾರ್ಯಸೂಚಿಯಲ್ಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News