ಈ ಊರಿನ ರಾಜಕಾರಣಿಗಳಿಗೆ ದಲಿತ ಪತ್ನಿಯೇ ಬೇಕು, ಏಕೆಂದರೆ..

Update: 2016-08-21 03:51 GMT

ಅಲೀಗಢ, ಆ.21: ರಾಜ್ಯದ ಇತರ ಕ್ಷೇತ್ರಗಳ ಜತೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಜಿಲ್ಲೆಯ ಇಗ್ನಾಸ್ ವಿಧಾನಸಭಾ ಕ್ಷೇತ್ರದಲ್ಲಿ ವಿಚಿತ್ರ ವೈವಾಹಿಕ ಆಫರ್‌ಗಳು ಬರುತ್ತಿವೆ. ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ, ಆಕಾಂಕ್ಷಿ ರಾಜಕಾರಣಿಗಳು ತಮ್ಮ ರಾಜಕೀಯ ತೆವಲು ತೀರಿಸಿಕೊಳ್ಳಲು ಇಲ್ಲಿನ ಪರಿಶಿಷ್ಟ ಜಾತಿ ವಧುಗಳನ್ನು ವಿವಾಹವಾಗುವ ಆಫರ್ ಮುಂದಿಡುತ್ತಿದ್ದಾರೆ!

ರವೀಂದ್ರ ಸಿಂಗ್ ಅಂಥ ಆಕಾಂಕ್ಷಿಗಳಲ್ಲೊಬ್ಬರು. "ಸಾರ್ವಜನಿಕ ಒತ್ತಾಯದ ಮೇರೆಗೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಆದರೆ ಇಗಾಸ್ ಮೀಸಲು ಕ್ಷೇತ್ರ. ನಾನು ಇತರ ಹಿಂದುಳಿದ ವರ್ಗಕ್ಕೆ ಸೇರಿದವ. ನಾನೀಗ ಸುಶಿಕ್ಷಿತ ಪರಿಶಿಷ್ಟ ಜಾತಿಯ ಯುವತಿಯನ್ನು ವಿವಾಹವಾಗಲು ಬಯಸಿದ್ದೇನೆ" ಎಂದು ಜಾಹೀರಾತು ನೀಡಿದ್ದಾರೆ. "ವರದಕ್ಷಿಣೆ ಇಲ್ಲ" ಎಂಬ ಸಿಂಗ್ ಜಾಹೀರಾತಿಗೆ ಈಗಾಗಲೇ 10 ಆಫರ್‌ಗಳು ಬಂದಿವೆ.

ಮೂರು ತಿಂಗಳ ಹಿಂದೆ ಬಿಜೆಪಿ ಮುಖಂಡ ಮೇಘರಾಜ್ ಸಿಂಗ್ ಕೂಡಾ ದಲಿತ ಯುವತಿಯನ್ನು ವಿವಾಹವಾಗಿದ್ದಾರೆ. ಅವರ ಮಾತಿನಲ್ಲೇ ಹೇಳುವುದಾದರೆ, "ನನ್ನ ರಾಜಕೀಯ ಕನಸನ್ನು ಪತ್ನಿಯ ಮೂಲಕ ನನಸುಗೊಳಿಸಿಕೊಳ್ಳುವ ಸಲುವಾಗಿ". ಆರ್‌ಎಲ್‌ಡಿ ಮುಖಂಡ ಹರಚರಣ ಸಿಂಗ್ ಅವರಿಗೂ, ಚುನಾವಣೆಗೆ ನಿಲ್ಲಲು ಅರ್ಹತೆ ಪಡೆಯುವ ಸಲುವಾಗಿ "ಅರ್ಹ ಪತ್ನಿ" ಬೇಕು. 25 ವರ್ಷಗಳ ಅವಧಿಗೆ ಈ ಕ್ಷೇತ್ರವನ್ನು ಮೀಸಲು ಕ್ಷೇತ್ರವಾಗಿ ಗುರುತಿಸಲಾಗಿದೆ. ಈ ಪೈಕಿ 10 ವರ್ಷ ಕಳೆದಿದ್ದು, ಇನ್ನೂ 15 ವರ್ಷ ಇದು ಮೀಸಲು ಕ್ಷೇತ್ರವಾಗಿಯೇ ಇರುತ್ತದೆ. ಹಿಂದೆ ಸಾಮಾನ್ಯ ಕ್ಷೇತ್ರವಾಗಿದ್ದಾಗ ಚೌಧರಿ ರಾಜೇಂದ್ರ ಸಿಂಗ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. "ಈ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಾನು ಸೇವೆ ಸಲ್ಲಿಸುತ್ತಾ ಬಂದಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶವಿಲ್ಲ. ಆದ್ದರಿಂದ ದಲಿತ ಯುವತಿಯನ್ನು ವಿವಾಹವಾಗಲು ನಿರ್ಧರಿಸಿದ್ದೇನೆ" ಎಂದು ರವೀಂದ್ರ ಸಿಂಗ್ ಹೇಳುತ್ತಾರೆ.

ಇದೇ ಸ್ಥಿತಿಯಲ್ಲಿರುವ ಆರ್‌ಎಲ್‌ಡಿ ನಾಯಕ ಹಾಗೂ ಜಿಲ್ಲಾಪಂಚಾಯತ್ ಸದಸ್ಯ ಹರಚರಣ್ ಸಿಂಗ್ ವೈಯಕ್ತಿಕ ಕಾರಣಗಳಿಗಾಗಿ ಪತ್ನಿಗೆ ವಿಚ್ಛೇದನ ನೀಡಿ, ಕುಸುಮ್ ಚೌಧರಿ ಎಂಬ ದಲಿತ ಯುವತಿಯನ್ನು ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News