ರಿವಾಲ್ವರ್‌ನಿಂದ ಗುಂಡು ಹಾರಿ ಪೊಲೀಸಧಿಕಾರಿ ಮೃತ್ಯು
ಕೊಚ್ಚಿ,ಆಗಸ್ಟ್ 21: ಸರ್ವೀಸ್ ರಿವಾಲ್ವರ್‌ನಿಂದ ಗುಂಡುಹಾರಿ ಕೊಚ್ಚಿಯಲ್ಲಿ ಪೊಲೀಸಧಿಕಾರಿಯೊಬ್ಬರು ಮೃತರಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.ತೃಪ್ಪುಣಿತ್ತುರ ಎ.ಆರ್. ಕ್ಯಾಂಪ್‌ನ ಅಸಿಸ್ಟೆಂಟ್ ಕಮಾಂಡೆಂಟ್ ಎರ್ನಾಕುಲಂನ ಸಾಬು ಮ್ಯಾಥ್ಯೂ ಮೃತರಾದ ಪೊಲೀಸಧಿಕಾರಿಯಾಗಿದ್ದು, ಬೆಳಗಾತ 1:45ಕ್ಕೆ ಡ್ಯೂಟಿ ಮುಗಿಸಿ ಪೊಲೀಸ್ ವಾಹನವನ್ನು ವಾಯಕ್ಕಾಲ ಎಂಬಲ್ಲಿ ಪಾರ್ಕ್ ಮಾಡುತ್ತಿದ್ದಾಗ ಘಟನೆ ಸಂಭವಿಸಿತು ಎನ್ನಲಾಗಿದೆ.
ಪ್ರಮಾದವಶಾತ್ ಗುಂಡು ಹಾರಿರಬೇಕೆಂದು ಪ್ರಾಥಮಿಕ ಅಂದಾಜು. ಹೊಟ್ಟೆಯ ಮೇಲ್ಭಾಗದಲ್ಲಿ ಗುಂಡುತಗಲಿದ್ದು ಸಾಬುರನ್ನು ಕೂಡಲೇ ಸಹೋದ್ಯೋಗಿಗಳು ಎರ್ನಾಕುಲಂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ಕರೆತಂದರೂ ಅವರು ಬದುಕಿ ಉಳಿಯಲಿಲ್ಲ. ಅವಘಡ ಸಂಭವಿಸಿದ ಸಮಯದಲ್ಲಿ ಚಾಲಕ ಮತ್ತು ಇನ್ನೊಬ್ಬ ಪೊಲೀಸ್ ಕಾನ್‌ಸ್ಟೇಬಲ್ ವಾಹನದಲ್ಲಿದ್ದರು ಎಂದು ತಿಳಿದು ಬಂದಿದೆ.
ಸಾಬು ಮ್ಯಾಥ್ಯೂ ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ತನಗೆ ಗುಂಡು ತಗಲಿತು ಎಂದು ಸಾಬು ಹೇಳಿದರು ಎಂದು ಅವರ ಜೊತೆಗಿದ್ದ ಇನ್ನಿಬ್ಬರು ಪೊಲೀಸರು ತಿಳಿಸಿದ್ದಾರೆ. ತೀರಾ ಹತ್ತಿರದಿಂದ ಗುಂಡು ಹಾರಿರುವುದರಿಂದ ಆಳವಾದ ಗಾಯವಾಗಿದೆ. ಇದು ಅವರ ಸಾವಿಗೆ ಕಾರಣವಾಯಿತೆಂದು ಅಂದಾಜಿಸಲಾಗಿದೆ. ಪಾರ್ಥಿವಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಆಲಪ್ಪುಝ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ವರದಿ ತಿಳಿಸಿದೆ.