ಈಜಿಪ್ಟ್‌ನೊಂದಿಗೆ ಸಂಬಂಧ ಮರುಸ್ಥಾಪನೆಗೆ ಸಿದ್ಧವಾದ ಟರ್ಕಿ !
ಇಸ್ತಾಂಬುಲ್,ಆಗಸ್ಟ್ 21: ಈಜಿಪ್ಟ್‌ನೊಂದಿಗೆ ಉಭಯಪಕ್ಷ ಸಂಬಂಧವನ್ನು ಮರುಸ್ಥಾಪಿಸಲು ಟರ್ಕಿ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಫ್ರೀಡಂ ಆ್ಯಂಡ್ ಜಸ್ಟಿಸ್ ಪಾರ್ಟಿ ನಾಯಕ ಮುಹಮ್ಮದ್ ಮುರ್ಸಿಯನ್ನು ಸೇನೆ ಕ್ಷಿಪ್ರಕ್ರಾಂತಿಯಲ್ಲಿ ಪದಚ್ಯುತಗೊಳಿಸಿದ ಬಳಿಕ ಟರ್ಕಿ ಈಜಿಪ್ಟ್‌ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿತ್ತು. ಮುಹಮ್ಮದ್ ಮುರ್ಸಿ, ಟರ್ಕಿ ಅಧ್ಯಕ್ಷ ಎರ್ದೊಗಾನ್‌ರ ನಿಕಟ ಅನುಯಾಯಿಯಾಗಿದ್ದರು. ಮುರ್ಸಿಯನ್ನು ಜೈಲಿಗಟ್ಟಿದ್ದುಮತ್ತು ಸೇನಾಕ್ಷಿಪ್ರಕ್ರಾಂತಿಯನ್ನು ಎರ್ದೊಗಾನ್ ಖಂಡಿಸಿದ್ದರು. ಆದರೆ ಈಗ ಈಜಿಪ್ಟ್‌ನೊಂದಿಗೆ ಆರ್ಥಿಕ-ಸಾಂಸ್ಕೃತಿಕ ಸಂಬಂಧವನ್ನು ಉತ್ತಮಪಡಿಸಲು ಟರ್ಕಿ ಮುಂದೆಬಂದಿದೆ ಎಂದು ವರದಿತಿಳಿಸಿದೆ.
ಈಜಿಪ್ಟ್‌ನೊಂದಿಗೆ ಸಂಬಂಧ ಮರುಸ್ಥಾಪಿಸಬೇಕಾಗಿದೆ. ಆದರೆ ಅದು ಒಂದು ರಾತ್ರಿಯಲ್ಲಿ ನಡೆದು ಬಿಡುವ ಕೆಲಸವಲ್ಲ ಎಂದು ಟರ್ಕಿ ಪ್ರಧಾನಿ ಅಲಿ ಯಿಲ್ದ್ರಿಮ್ ಹೇಳಿದ್ದಾರೆಂದು ತಿಳಿದು ಬಂದಿದೆ. ಕಳೆದ ಜೂನ್‌ನಲ್ಲಿ ಇಸ್ರೇಲ್ ಮತ್ತು ರಷ್ಯದೊಂದಿಗೆ ಟರ್ಕಿ ರಾಜತಾಂತ್ರಿಕ ಸಂಬಂಧಗಳನ್ನುಮರುಸ್ಥಾಪಿಸಿತ್ತು. ಯೆಲ್ದ್ರಿಮ್ ಈ ಮೊದಲು ಕೂಡಾ ಈ ರೀತಿಯ ಅಭಿಪ್ರಾಯವನ್ನು ಪ್ರಕಟಿಸಿದ್ದು, ಈಜಿಪ್ಟ್,ಸಿರಿಯ ಮುಂತಾದ ರಾಷ್ಟ್ರಗಳೊಂದಿಗೆ ಶಾಶ್ವತ ಶತ್ರುತ್ವವನ್ನು ನಾವು ಬಯಸುವುದಿಲ್ಲ ಎಂದು ಹೇಳಿದ್ದರು. ಟರ್ಕಿಯಲ್ಲಿ ಸೈನಿಕ ವಿಫಲ ಕ್ಷಿಪ್ರ ಕ್ರಾಂತಿ ನಡೆದಾಗ ಈಜಿಪ್ಟ್ ಅಧ್ಯಕ್ಷ ಅಲ್‌ಸೀಸಿ ಮೌನಕ್ಕೆ ಶರಣಾಗಿದ್ದರು ಎಂದು ವರದಿ ತಿಳಿಸಿದೆ.