×
Ad

ಮಲತಾಯಿಯಿಂದ ಭಾರತೀಯ ಬಾಲಕಿಯ ಕೊಲೆ

Update: 2016-08-21 20:01 IST

ನ್ಯೂಯಾರ್ಕ್, ಆ. 21: ಒಂಬತ್ತು ವರ್ಷದ ಬಾಲಕಿಯೊಬ್ಬಳು ಇಲ್ಲಿನ ತನ್ನ ಮನೆಯಲ್ಲಿ ನಿಗೂಢ ಸನ್ನಿವೇಶದಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಪೊಲೀಸರು ಬಾಲಕಿಯ ಮಲತಾಯಿ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.
ಮೃತ ಬಾಲಕಿ ಆಶಾದೀಪ್ ಕೌರ್ ಕೇವಲ ಮೂರು ತಿಂಗಳ ಹಿಂದೆ ಭಾರತದಿಂದ ಇಲ್ಲಿನ ಕ್ವೀನ್ಸ್‌ಗೆ ಬಂದು ಅಪಾರ್ಟ್‌ಮೆಂಟೊಂದರಲ್ಲಿ ತನ್ನ ತಂದೆ ಸುಖ್‌ಜಿಂದರ್ ಸಿಂಗ್ ಮತ್ತು ಮಲತಾಯಿ ಅರ್ಜುನ್ ಸಮ್ದಿ ಪರ್ದಾಸ್‌ರೊಂದಿಗೆ ವಾಸಿಸುತ್ತಿದ್ದಳು. ಇದೇ ಅಪಾರ್ಟ್‌ಮೆಂಟ್‌ನಲ್ಲಿ ಇನ್ನೊಂದು ದಂಪತಿ ವಾಸಿಸುತ್ತಿತ್ತು.

ಆಶಾದೀಪ್ ತನ್ನ ಮನೆಯ ಬಾತ್‌ಟಬ್‌ನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಆಕೆಯ ದೇಹದ ಮೇಲೆ ತರಚಿದ ಗಾಯಗಳಿದ್ದವು.
ಪರ್ದಾಸ್ (55) ಶುಕ್ರವಾರ ಬಾಲಕಿಯ ಕತ್ತು ಹಿಸುಕಿ ಹತ್ಯೆಗೈದಿದ್ದಾಳೆ ಎಂಬುದಾಗಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಆಶಾದೀಪ್ ಸ್ನಾನದ ಕೋಣೆಗೆ ತನ್ನ ಮಲತಾಯಿಯೊಂದಿಗೆ ಹೋಗಿರುವುದನ್ನು ಆ ಅಪಾರ್ಟ್‌ಮೆಂಟ್‌ನಲ್ಲಿದ್ದ ಇನ್ನೊಂದು ಕುಟುಂಬದ ವ್ಯಕ್ತಿಯೊಬ್ಬರು ನೋಡಿದ್ದಾರೆ. ಮಲತಾಯಿ ಬಳಿಕ ಒಬ್ಬಳೇ ಹೊರಬಂದು ಮನೆಯಿಂದ ಹೊರಹೋಗಿದ್ದಾಳೆ.

ಆಶಾದೀಪ್ ಸ್ನಾನ ಮಾಡುತ್ತಿದ್ದಾಳೆ ಎಂಬುದಾಗಿ ಆಗ ಪರ್ದಾಸ್ ಆ ವ್ಯಕ್ತಿಗೆ ಹೇಳಿದ್ದಳು. ತುಂಬಾ ಹೊತ್ತಾದರೂ ಬಾಲಕಿ ಹೊರಬರದಿರುವುದನ್ನು ನೋಡಿದ ಆ ವ್ಯಕ್ತಿ ಸ್ನಾನದ ಕೋಣೆಗೆ ಹೋಗಿ ನೋಡಿದಾಗ ಬಾಲಕಿಯ ಮೃತಪಟ್ಟಿದ್ದಳು.
ಇದಕ್ಕಿಂತ ಮೊದಲು ಪರ್ದಾಸ್ ಬಾಲಕಿಗೆ ಹಿಂಸೆ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಬಾಲಕಿಯ ತಾಯಿ ಮತ್ತು ತಂದೆಗೆ ವಿವಾಹ ವಿಚ್ಛೇದನ ಆಗಿದ್ದು, ತಾಯಿ ಭಾರತದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News