ವಿಶ್ವಸಂಸ್ಥೆಯಿಂದ ಹೊರಬಂದು ಬೇರೆಯೇ ಸಂಘಟನೆ ಕಟ್ಟುವ ಬೆದರಿಕೆ!

Update: 2016-08-21 16:05 GMT

ಮನಿಲಾ, ಆ. 21: ಮಾದಕ ದ್ರವ್ಯದ ವಿರುದ್ಧ ತಾನು ಸಾರಿರುವ ಸಮರದ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಹತ್ಯಾ ಸರಣಿಯನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಕರೆ ನೀಡಿರುವುದಕ್ಕೆ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾನು ವಿಶ್ವಸಂಸ್ಥೆಯಿಂದ ಹೊರಬಂದು, ಚೀನಾ ಮತ್ತು ಇತರ ದೇಶಗಳೊಂದಿಗೆ ಸೇರಿ ಬೇರೆಯದೇ ಆದ ಸಂಘಟನೆಯೊಂದನ್ನು ನಿರ್ಮಿಸಬಹುದಾಗಿದೆ ಎಂಬ ಬೆದರಿಕೆಯನ್ನು ಅವರು ಹಾಕಿದ್ದಾರೆ.


ಮಾದಕದ್ರವ್ಯವನ್ನು ಮೂಲೋತ್ಪಾಟನೆ ಮಾಡುವ ಭರವಸೆಯೊಂದಿಗೆ ರಾಡ್ರಿಗೊ ಅಧಿಕಾರಕ್ಕೆ ಬಂದ ನಂತರ ಫಿಲಿಪ್ಪೀನ್ಸ್‌ನಲ್ಲಿ ನಡೆಯುತ್ತಿರುವ ನ್ಯಾಯಾಂಗಬಾಹಿರ ಹತ್ಯೆಗಳನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಇಬ್ಬರು ಮಾನವಹಕ್ಕುಗಳ ಪರಿಣತರು ಕಳೆದ ವಾರ ಮನಿಲಾವನ್ನು ಒತ್ತಾಯಿಸಿದ್ದರು.


ಮೇ 9ರಂದು ನಡೆದ ಚುನಾವಣೆಯಲ್ಲಿ ರಾಡ್ರಿಗೊ ಅಧಿಕಾರಕ್ಕೆ ಬಂದ ಬಳಿಕ ಸುಮಾರು 900 ಶಂಕಿತ ಮಾದಕದ್ರವ್ಯ ಸಾಗಣೆದಾರರನ್ನು ಕೊಲ್ಲಲಾಗಿದೆ.
ಈ ಹತ್ಯೆಗಳಿಗೆ ಸರಕಾರ ಕಾರಣವಲ್ಲ ಎಂದು ರಾಡ್ರಿಗೊ ಶುಕ್ರವಾರ ಹೇಳಿದರು. ಬಳಿಕ ಶನಿವಾರ ತನ್ನ ತವರು ಪಟ್ಟಣ ಡವಾವೊದಲ್ಲಿ ಮಧ್ಯರಾತ್ರಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿ, ಈ ಹತ್ಯೆಗಳನ್ನು ನಡೆಸಿರುವುದು ಪೊಲೀಸರಲ್ಲ ಎಂದರು. ಬೇಕಾದರೆ ಸ್ವತಃ ನೀವೇ ತನಿಖೆ ಮಾಡಿದ ಎಂಬುದಾಗಿ ಅವರು ವಿಶ್ವಸಂಸ್ಥೆಯ ಪರಿಣತರನ್ನು ಆಹ್ವಾನಿಸಿದರು.


‘‘ನೀವು ಅತ್ಯಂತ ಮೂರ್ಖ ಪರಿಣತರು ಎಂಬುದಾಗಿ ನಾನು ಜಗತ್ತಿಗೆ ಸಾಬೀತುಪಡಿಸುತ್ತೇನೆ’’ ಎಂದು ಹೇಳಿದ ಅವರು, ಮಾದಕದ್ರವ್ಯಕ್ಕೆ ಸಂಬಂಧಿಸಿದ ಸಾವುಗಳನ್ನು ಮಾತ್ರ ಲೆಕ್ಕ ಮಾಡಬೇಡಿ, ಮಾದಕದ್ರವ್ಯಕ್ಕೆ ಬಲಿಯಾದ ಅಮಾಯಕ ಜೀವಗಳನ್ನೂ ಲೆಕ್ಕ ಮಾಡಿ’’ ಎಂದು ಅವರು ಸವಾಲೆಸೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News