ವಾಯು ಮಾಲಿನ್ಯದಿಂದ ರಕ್ಷಣೆಗೆ ಸಾಮಾನ್ಯ ಮಾಸ್ಕ್ ಬಳಸುತ್ತಿದ್ದೀರಾ? ಹಾಗಾದರೆ ಇದನ್ನು ಓದಿ
ಮಾಲಿನ್ಯದಿಂದ ಹೆಚ್ಚು ಪರಿಣಾಮಕಾರಿಯಾಗಿ ರಕ್ಷಣೆಪಡೆದುಕೊಳ್ಳುವ ಅಗತ್ಯವಿದೆ. ಭಾರತ ಮತ್ತು ಚೀನಾದಲ್ಲಿ ಸಾಮಾನ್ಯವಾಗಿ ಬಳಸಲಾಗುವ ಅಗ್ಗದ ಬಟ್ಟೆಯ ಮಾಸ್ಕ್‌ಗಳಿಂದ ವಾಯು ಮಾಲಿನ್ಯದಿಂದ ಸೂಕ್ತ ರಕ್ಷಣೆ ಸಾಧ್ಯವಾಗದು. ರಕ್ಷಣೆ ಪಡೆದುಕೊಂಡಿದ್ದೇವೆ ಎನ್ನುವ ಪೊಳ್ಳು ಭಾವನೆಯಷ್ಟೇ ಮನಕ್ಕೆ ಸಿಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಏಷ್ಯಾ ಮತ್ತು ದಕ್ಷಿಣ ಏಷ್ಯಾಗಳಲ್ಲಿ ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ಬಳಸಲಾಗುವ ಬಳಸಿ ಎಸೆಯುವ ಸರ್ಜಿಕಲ್ ಮಾಸ್ಕ್‌ಗಳು ಮತ್ತು ತೊಳೆಯಬಹುದಾದ ಬಟ್ಟೆಯ ಮಾಸ್ಕ್‌ಗಳನ್ನು ಪರಿಶೀಲಿಸಿ ಮಸಾಚ್ಯುಸೆಟ್ಸ್ ಅಮಗರ್ಸ್ಟ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿದೆ. ಬಟ್ಟೆಯ ಮಾಸ್ಕ್‌ಗಳಿಂದ ಸ್ವಲ್ಪ ಮಟ್ಟಿಗೆ ಮಾಲಿನ್ಯ ದೂರವಾಗಬಹುದು. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಆಯ್ಕೆಗಳಿಗೆ ಹೋಲಿಸಿದಲ್ಲಿ ಈ ಬಹಳ ಸಾಮಾನ್ಯವಾಗಿ ಬಳಸುವ ಬಟ್ಟೆಯ ಮಾಸ್ಕ್‌ಗಳು ಏನೂ ಪ್ರಯೋಜನವಿಲ್ಲ. ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇಂತಹ ಮಾಸ್ಕ್‌ಗಳು ರಕ್ಷಣೆ ಒದಗಿಸುತ್ತಿವೆ ಎನ್ನುವ ನಂಬಿಕೆ ಬಿಡಬೇಕು. ಪರಿಸರದ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಖಾಸಗಿಯಾಗಿ ಇಂತಹ ವಸ್ತುಗಳನ್ನು ಬಳಸುವಾಗ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಅಧ್ಯಯನಕಾರ ರಿಚರ್ಡ್ ಪೆಲ್ಟೀರ್ ಹೇಳಿದ್ದಾರೆ.
ನೇಪಾಳದಲ್ಲಿ ನಡೆದ ಹಿಂದಿನ ವಾಯು ಗುಣಮಟ್ಟದ ಸಂಶೋಧನಾ ಪ್ರಾಜೆಕ್ಟ್‌ನಲ್ಲಿ ಸಂಶೋಧಕರು ಬೀದಿಗಳಲ್ಲಿ ಜನರು ಸರ್ಜಿಕಲ್ ಮತ್ತು ಬಟ್ಟೆಯ ಮಾಸ್ಕ್‌ಗಳನ್ನು ಕಟ್ಟಿಕೊಂಡು ಓಡಾಡುವುದನ್ನು ಕಂಡಿದ್ದರು. ಕಠ್ಮಂಡುನಲ್ಲಿ ಮಾಲಿನ್ಯ ಉಂಟು ಮಾಡುವ ಗ್ಯಾಸೋಲಿನ್ ಮತ್ತು ಡೀಸಲ್ ಇಂಜಿನ್‌ಗಳು ಹಾಗೂ ಟೈರ್‌ಗಳು ಮತ್ತು ತ್ಯಾಜ್ಯವನ್ನು ಸುಡುವುದೂ ಸಾಮಾನ್ಯವಾಗಿರುವ ಕಾರಣ ವಾಯು ಮಾಲಿನ್ಯ ಅತೀ ಹೆಚ್ಚಾಗಿದೆ. ಈ ಮಾಸ್ಕ್‌ಗಳು ಎಷ್ಟು ಪರಿಣಾಮಕಾರಿ ಎಂದು ನಮಗೇ ಅಚ್ಚರಿಯಾಗಿತ್ತು. ಅವುಗಳ ಬಗ್ಗೆ ತನಿಖೆ ನಡೆಸುವ ಯಾವುದೇ ಅಧ್ಯಯನಗಳಿಲ್ಲದೆ ಇರುವುದು ನನಗೆ ಆಘಾತ ತಂದಿತ್ತು ಎನ್ನುತ್ತಾರೆ ಪೆಲ್ಟೀರ್.
ಸಾಮಾನ್ಯ ಔದ್ಯಮಿಕ ಹೈಜೀನ್ ಮಾಸ್ಕ್ ಅನ್ನು N95 ಎಂದು ಕರೆಯಲಾಗುತ್ತಿದ್ದು, ಅತ್ಯುತ್ತಮವಾಗಿದೆ. ಅಂತಹ ಮಾಸ್ಕ್‌ಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸುಲಭವಾಗಿ ಸಿಗುವುದಿಲ್ಲ. ಬಹುತೇಕ ಗ್ರಾಹಕರಿಗೆ ಬಹಳ ದುಬಾರಿಯೂ ಆಗಿರುತ್ತದೆ. ಇದಕ್ಕೆ ಬದಲಾಗಿ ಮರಳಿ ಬಳಸಬಹುದಾದ ಅಗ್ಗದ ಬಟ್ಟೆಯ ಮಾಸ್ಕ್‌ಗಳನ್ನು ತೊಳೆದು ಮತ್ತೆ ಮತ್ತೆ ಬಳಸುತ್ತಾರೆ.
ಸಂಶೋಧಕರು ತಮ್ಮ ಅಧ್ಯಯನದಲ್ಲಿ ಪ್ಲೀಟೆಡ್ ಸರ್ಜಿಕಲ್ ಟೈಪ್, ಬಟ್ಟೆ ಮತ್ತು ನಿಶ್ವಾಸದ ಪೊರೆಗಳಿರುವ ಕೋನ್ ಆಕಾರದ ಬಟ್ಟೆಗಳ ಮಾಸ್ಕನ್ನು ಪರಿಣಾಮಕಾರಿಯಾಗಿದೆಯೇ ಎಂದು ಪರೀಕ್ಷಿಸಿದ್ದಾರೆ. ನೈಜ ಪರಿಸರ ಮಾಲಿನ್ಯದಂತಹ ಐದು ಸಿಂಥೆಟಿಕ್ ಏರೋಸೋಲ್ ಕಣಗಳ ಗಾತ್ರದ ವಸ್ತುಗಳನ್ನು ಮತ್ತು ಮೂರು ಡೀಸಲ್ ಹೊರ ಬಿಡುವ ಕಶ್ಮಲಗಳನ್ನು ಈ ಮಾಸ್ಕ್‌ಗಳಲ್ಲಿ ಪರೀಕ್ಷಿಸಿದ್ದರು. ಬಟ್ಟೆಯ ಮಾಸ್ಕ್‌ಗಳ ಪೈಕಿ ನಿಶ್ವಾಸ ಪೊರೆಗಳಿರುವ ಮಾಸ್ಕ್‌ಗಳು ಚೆನ್ನಾಗಿ ಕೆಲಸ ಮಾಡಿ ಶೇ. 80-90ರಷ್ಟು ಸಿಂಥೆಟಿಕ್ ಕಣಗಳನ್ನು ಶೇ. 57ರಷ್ಟು ಡೀಸಲ್ ಧೂಮಕಣಗಳನ್ನು ತೆಗೆದಿದೆ. ಸಾಮಾನ್ಯ ಬಟ್ಟೆಯ ಮಾಸ್ಕ್‌ಗಳು ಕೇವಲ 2.5 ಮೈಕ್ರೋಮೀಟರ್‌ಗಳಿಗಿಂತ ಸಣ್ಣದಿರುವ ಕಣಗಳನ್ನು ನಿವಾರಿಸಲು ಹೆಚ್ಚು ಉತ್ತಮವಾಗಿಲ್ಲ. ಈ ಕಣಗಳೇ ಶ್ವಾಸಕೋಶಕ್ಕೆ ಹೆಚ್ಚು ಸಮಸ್ಯೆ ಒಡ್ಡುವುದು. ಅಗ್ಗದ ಬಟ್ಟೆ ಮಾಸ್ಕ್‌ಗಳು ಸಾಮಾನ್ಯ ಗುಣಮಟ್ಟದ 30, 100 ಮತ್ತು 500 ನ್ಯಾನೋಮೀಟರ್‌ಗಳ ಕಣಗಳನ್ನು ಮತ್ತು 1 ಮತ್ತು 2.5 ಮೈಕ್ರೋಮೀಟರ್‌ಗಳ ಕಣಗಳನ್ನು ಕೇವಲ ಶೇ. 39-65 ರಷ್ಟೇ ಕಣಗಳನ್ನು ನಿವಾರಿಸಿರುವುದು ಪತ್ತೆಯಾಗಿದೆ. ಈ ಎಲ್ಲಾ ಮಾಸ್ಕ್‌ಗಳು ಡೀಸಲ್ ಹೊಗೆಯ ಕಣಗಳನ್ನು ನಿವಾರಿಸುವಲ್ಲಿ ವಿಫಲವಾಗಿರುವುದಾಗಿ ಸಂಶೋಧಕರು ಹೇಳಿದ್ದಾರೆ. ನೇಪಾಳವನ್ನು ಮೀರಿದ ಪರಿಣಾಮ ಈ ಅಧ್ಯಯನಕ್ಕಿದೆ ಎನ್ನಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಮತ್ತು ಮುಖ್ಯವಾಗಿ ಚೀನಾ ಮತ್ತು ಭಾರತದಲ್ಲೂ ಇಂತಹ ಬಟ್ಟೆ ಮಾಸ್ಕ್‌ಗಳನ್ನು ಬಳಸಲಾಗುತ್ತದೆ.