ವಾಜಪೇಯಿ ನೇತೃತ್ವದಲ್ಲಿ ಕಾಶ್ಮೀರ ವಿವಾದ ಬಗೆಹರಿಯುವ ಹಂತದಲ್ಲಿತ್ತು: ಭಾಗವತ್

Update: 2016-08-22 14:53 GMT

ಆಗ್ರಾ,ಆ.22: ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಾಯಕತ್ವದಡಿ ಕಾಶ್ಮೀರ ವಿವಾದವು ಬಗೆಹರಿಯುವ ಹಂತದಲ್ಲಿತ್ತು ಎಂದು ಇಲ್ಲಿ ಹೇಳಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರು, ನಂತರದ ಸರಕಾರಗಳು ವಾಜಪೇಯಿಯವರ ಪ್ರಯತ್ನಗಳನ್ನು ಮುಂದುವರಿಸಲಿಲ್ಲ ಎಂದು ವಿಷಾದಿಸಿದರು.
ಕಾಶ್ಮೀರ ಜನತೆ ಪಾಕಿಸ್ತಾನದಲ್ಲಿರಲು ಬಯಸುವುದಿಲ್ಲ. ಕಾಶ್ಮೀರದ ಜನರಲ್ಲಿ ರಾಷ್ಟ್ರೀಯವಾದಿ ಭಾವನೆಗಳನ್ನು ನಾವು ಬೆಳೆಸಬೇಕಾಗಿದೆ ಎಂದು ರವಿವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಕಣಿವೆಯಲ್ಲಿನ ಅಶಾಂತಿ ಕುರಿತು ಮಾತನಾಡುತ್ತಿದ್ದ ಅವರು ಹೇಳಿದರು.
ನಗರದಲ್ಲಿ ಸುಮಾರು 2000 ಯುವದಂಪತಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರ ವಿವಾದ,ಗೋರಕ್ಷಣೆ,ಮಿಶನರಿ ಶಾಲೆಗಳು,ಏಕರೂಪ ನಾಗರಿಕ ಸಂಹಿತೆ ಇತ್ಯಾದಿಗಳ ಕುರಿತು ಸಭಿಕರ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದರು.
ಗೋರಕ್ಷಣೆ ಕುರಿತಂತೆ ಅವರು, ಈ ಕಾರ್ಯವನ್ನು ಕಾನೂನಿನ ಚೌಕಟ್ಟಿನೊಳಗೆ ಮಾಡಬೇಕು ಎಂದರು.
ಪ್ರಬಲ ಸಂಸ್ಕಾರ ವ್ಯವಸ್ಥೆಯನ್ನು ಪ್ರತಿಪಾದಿಸಿದ ಅವರು, ಪಾಶ್ಚಿಮಾತ್ಯ ಪ್ರಭಾವವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ನಮ್ಮ ಪೂರ್ವಜರು ನಮಗೆ ನೀಡಿರುವ ಮಾರ್ಗದರ್ಶಿ ಸೂಚಿಗಳು ಮತ್ತು ಸಂಹಿತೆಗಳನ್ನು ಅನುಸರಿಸಿ ನಾವು ಮುಂದೆ ಸಾಗಬೇಕು. ದೇಶವು ಆತ್ಮವಿಶ್ವಾಸದೊಡನೆ ಮುಂದುವರಿಯಬೇಕೆಂದರೆ ನಾವು ನಮ್ಮ ಯುವಜನರಿಗೆ ಸಂಸ್ಕಾರಗಳನ್ನು ಕಲಿಸುವುದು ಅಗತ್ಯವಾಗಿದೆ. ಯುವದಂಪತಿಗಳು ಈ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ನಾವು ನಮ್ಮ ದೇಶದಿಂದಲೇ ಗುರುತಿಸಲ್ಪಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News