×
Ad

ಮೋದಿ ಹೇಳಿಕೆಗೆ ಬೆಂಬಲ ಸೂಚಿಸಿದ್ದ ಬಲೂಚ್ ನಾಯಕರ ವಿರುದ್ಧ ಮೊಕದ್ದಮೆ

Update: 2016-08-22 20:38 IST

ಇಸ್ಲಾಮಾಬಾದ್, ಆ. 22: ಬಲೂಚಿಸ್ತಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗಳಿಗೆ ಬೆಂಬಲ ಸೂಚಿಸಿರುವುದಕ್ಕಾಗಿ ಪ್ರತ್ಯೇಕತಾವಾದಿ ಬಲೂಚಿ ನಾಯಕರಾದ ಬ್ರಹಾಂಡಾಗ್ ಬುಗ್ಟಿ, ಹರ್ಬಿಯಾರ್ ಮರ್ರಿ ಮತ್ತು ಬಾನುಕ್ ಕರಿಮ ಬಲೂಚ್ ಅವರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಬಲೂಚಿಸ್ತಾನದ ಖುಝ್ದಾರ್ ಪ್ರದೇಶದಲ್ಲಿನ ಕೆಲವು ನಿವಾಸಿಗಳು ನೀಡಿದ ದೂರಿನ ಆಧಾರದಲ್ಲಿ ಅವರ ವಿರುದ್ಧ ಐದು ಪತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ‘ಡಾನ್’ ಆನ್‌ಲೈನ್ ವರದಿ ಮಾಡಿದೆ.
ಮೋದಿ ಆಗಸ್ಟ್ 15ರಂದು ನೀಡಿರುವ ಹೇಳಿಕೆಯನ್ನು ಬುಗ್ಟಿ, ಮರ್ರಿ ಮತ್ತು ಬಲೂಚ್ ‘‘ಬೆಂಬಲಿಸಿದ್ದಾರೆ’’ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಖುಝ್ದಾರ್ ಮುಹಮ್ಮದ್ ಅಶ್ರಫ್ ಜಟಕ್ ತಿಳಿಸಿದರು.
ಬಲೂಚಿಸ್ತಾನ, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ‘ಆಝಾದ್ ಜಮ್ಮು ಮತ್ತು ಕಾಶ್ಮೀರ’ದ ಜನರು ಕಳೆದ ಕೆಲವು ದಿನಗಳಲ್ಲಿ ತನಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನ ಸ್ವಾತಂತ್ರ ದಿನದ ಭಾಷಣದಲ್ಲಿ ಹೇಳಿದ್ದರು.
ಪಾಕಿಸ್ತಾನದ ವಿರುದ್ಧ ಆಕ್ರಮಣ ನಡೆಸುವಂತೆ ಬಲೂಚ್ ನಾಯಕರು ಮೋದಿಯನ್ನು ಬೆಂಬಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಆರೋಪಿಸಿದರು.
ಬಲೂಚಿಸ್ತಾನದ ಮುಖ್ಯಮಂತ್ರಿ ಸನಾವುಲ್ಲಾ ಝೆಹ್ರಿ, ಕಳೆದ ವಾರದ ಭಾಷಣದಲ್ಲಿ ಮೋದಿಯ ಹೇಳಿಕೆಗಳನ್ನು ಖಂಡಿಸಿದ್ದರು. ಬಲೂಚಿಸ್ತಾನದಲ್ಲಿ ಈಗ ನಡೆಯುತ್ತಿರುವ ಬಂಡಾಯಕ್ಕೆ ಭಾರತ ಸರಕಾರ ಸಂಪೂರ್ಣ ನೆರವು ನೀಡುತ್ತಿದೆ ಎಂದು ಅವರು ಆರೋಪಿಸಿದ್ದರು.
ಬುಗ್ಟಿಗೆ ಭಾರತದಿಂದ ಹಣ ಬರುತ್ತಿದೆ ಎಂಬುದಾಗಿಯೂ ಅವರು ಆರೋಪಿಸಿದರು. ಅದಕ್ಕಾಗಿಯೇ ಅವರು ಮೋದಿಯ ಹೇಳಿಕೆಗಳಿಗೆ ಬೆಂಬಲ ನೀಡಿದ್ದಾರೆ ಎಂದರು.


ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ
ಮೋದಿಯ ಭಾಷಣದಿಂದ ಪ್ರೇರಿತರಾದ ಜನರು ಬಲೂಚಿಸ್ತಾನದಾದ್ಯಂತ ಭಾರೀ ಸಂಖ್ಯೆಯಲ್ಲಿ ಪಾಕಿಸ್ತಾನ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಭಾರೀ ಸಂಖ್ಯೆಯಲ್ಲಿ ಬುಡಕಟ್ಟು ಜನರು ದೇರಾ ಬುಗ್ಟಿ, ಖುಝ್ದಿರ್, ಕ್ವೆಟ್ಟಾ, ಚಮನ್ ಮತ್ತು ಪ್ರಾಂತದ ಇತರ ಭಾಗಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News