×
Ad

ಪದ್ಮನಾಭ ಸ್ವಾಮಿ ದೇವಸ್ಥಾನದ ಚಿನ್ನ ನಾಪತ್ತೆ : ರಾಯ್ ವರದಿ ನಂಬಲನರ್ಹ; ರಾಜ ಕುಟುಂಬ

Update: 2016-08-22 21:20 IST

ತಿರುವನಂತಪುರ,ಆ.22: ಇಲ್ಲಿಯ ಪ್ರಸಿದ್ಧ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದಿಂದ ಚಿನ್ನದ ಕಳಶಗಳು ಕಳ್ಳತನವಾಗಿವೆಯೆಂದು ಆರೋಪಿಸಿ ಮಾಜಿ ಸಿಎಜಿ ವಿನೋದ್ ರಾಯ್ ಅವರು ಸಲ್ಲಿಸಿರುವ ಆಡಿಟ್ ವರದಿಗೆ ತಿರುವಾಂಕೂರು ರಾಜ ಕುಟುಂಬವು ಸೋಮವಾರ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ವರದಿಯನ್ನು ಸಿದ್ಧಗೊಳಿಸುವಾಗ ತನ್ನೊಂದಿಗೆ ಸಮಾಲೋಚಿಸಿರಲಿಲ್ಲ ಎಂದು ಅದು ಹೇಳಿದೆ. ಈ ಹಿಂದೆ ಶತಮಾನಗಳಷ್ಟು ಪುರಾತನವಾದ ಈ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದ ಅಂದಿನ ರಾಜ ಮನೆತನದ ಸದಸ್ಯ ಆದಿತ್ಯ ವರ್ಮಾ ಅವರು, ವರದಿಯಲ್ಲಿ ಚಿನ್ನದ ಸೊತ್ತುಗಳಿಗೆ ಸಂಬಂಧಿಸಿದಂತೆ ಅಂಕಿಅಂಶಗಳಲ್ಲಿ ಇಷ್ಟೊಂದು ಭಾರೀ ವ್ಯತ್ಯಾಸವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.

ವರದಿಯು ತಮಗೆ ನೋವನ್ನುಂಟು ಮಾಡಿದೆ ಎಂದ ಅವರು, ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ವರದಿಯನ್ನು ಸಿದ್ಧಪಡಿಸುವಾಗ ರಾಜ ಕುಟುಂಬದ ಸದಸ್ಯರನ್ನು ಸಂಪರ್ಕಿಸಲಾಗಿರಲಿಲ್ಲ. ನಮ್ಮನ್ನು ಸಂಪರ್ಕಿಸಿದ್ದರೆ ಇಂತಹ ಪ್ರಮಾದ ನಡೆಯುತ್ತಿರಲಿಲ್ಲ ಎಂದರು.
ಇಲ್ಲಿ ಪ್ರಾದೇಶಿಕ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅವರು, ದೇವಸ್ಥಾನದ ದಾಖಲೆಗಳಲ್ಲಿ ಹಳೆಯ ಮಲಯಾಳಂ ಅಂಕಿಗಳನ್ನು ಬಳಸಲಾಗಿತ್ತು ಮತ್ತು ಇವುಗಳ ಅನುವಾದದ ಸಂದರ್ಭ ಅಂಕಿಅಂಶಗಳಲ್ಲಿ ತಪ್ಪುಗಳು ಸಂಭವಿಸಿರಬಹುದು ಎಂದರು.
ರಾಯ್ ನೇತೃತ್ವದಲ್ಲಿ ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ಸಮಿತಿಯು ದೇವಸ್ಥಾನದ ಖರ್ಚುವೆಚ್ಚಗಳಲ್ಲಿ ಅಸಾಧಾರಣ ಹೆಚ್ಚಳ ಮತ್ತು 186 ಕೋ.ರೂ.ವೌಲ್ಯದ ಚಿನ್ನದ ಕಲಶಗಳು ನಾಪತ್ತೆಯಾಗಿರುವುದನ್ನು ಬಯಲಿಗೆಳೆದು,ಅಕ್ರಮಗಳ ತನಿಖೆಗೆ ಸಮಿತಿಯೊಂದರ ರಚನೆಗೆ ಶಿಫಾರಸು ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವರ್ಮಾ ಈ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News