ಭಾರತದ ಸ್ಟಾರ್ ಶಟ್ಲರ್‌ಗಳ ಹಿಂದಿನ ಪ್ರೇರಕ ಶಕ್ತಿ
ಭಾರತ ಬ್ಯಾಡ್ಮಿಂಟನ್ ಕ್ಷೇತ್ರದ ಧ್ರುವತಾರೆಯಾಗಿ ಮಿನುಗುತ್ತಿರುವ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ವಿ.ಎಸ್.ಸಿಂಧು ಅವರ ಹಿಂದಿನ ಪ್ರೇರಕ ಶಕ್ತಿ ಆಕೆಯ ಕೋಚ್ ಹೈದರಾಬಾದಿನ ಪುಲ್ಲೇಲ ಗೋಪಿಚಂದ್ ಅಕಾಡಮಿಯ ಮುಖ್ಯಸ್ಥ ಪಿ.ಗೋಪಿಚಂದ್ ಎಂಬುದು ನಿರ್ವಿವಾದಿತ. ಸಿಂಧು ಮಾತ್ರವಲ್ಲದೆ ಸೈನಾ ನೆಹ್ವಾಲ್ ಸಹಿತ ಭಾರತದ ಸ್ಟಾರ್ ಶಟ್ಲರ್‌ಗಳ ಯಶಸ್ಸು ಹಾಗೂ ಚೀನೀ ಆಟಗಾರರ ಬಗೆಗೆ ಅವರಿಗಿದ್ದ ಭಯವನ್ನು ದೂರ ಮಾಡಿದವರೇ ಅಪ್ರತಿಮ ಬ್ಯಾಡ್ಮಿಂಟನ್ ಕೋಚ್ ವಿ ಗೋಪಿಚಂದ್. ಒಂದು ವಿಧದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಪಟುಗಳಿಗೆ ಅವರು ಗಾಡ್ ಪಾದರ್ ಇದ್ದಂತೆ. 2001ರ ಆಲ್ ಇಂಡಿಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್ ಕೂಡ ಗೆದ್ದಿದ್ದ ಅವರ ಅಕಾಡಮಿ ವಿಶ್ವ ದರ್ಜೆಯ ಆಟಗಾರರನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
2003ರಲ್ಲಿ ಅವರು ತಮ್ಮ ಸ್ಪೋರ್ಟ್ಸ್‌ಅಕಾಡಮಿಯನ್ನು ಸ್ಥಾಪಿಸುವ ಸಲುವಾಗಿ ತಮ್ಮ ಕುಟುಂಬದ ಆಸ್ತಿಯೆಲ್ಲವನ್ನೂ ಅಡವಿಟ್ಟಿದ್ದರೆಂಬುದನ್ನು ಅವರು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಬೆಳ್ಳಂಬೆಳಗ್ಗೆ ಅವರ ಅಕಾಡಮಿಯಲ್ಲಿ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಆರಂಭವಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಪಿ.ವಿ ಸಿಂಧು, ಕಿದಂಬಿ ಶ್ರೀಕಾಂತ್ ಹಾಗೂ ಪರುಪಳ್ಳಿ ಕಶ್ಯಪ್ ಬೆಳಗ್ಗೆ 4:30ಕ್ಕೆ ತಮ್ಮ ಪ್ರಾಕ್ಟೀಸ್ ಆರಂಭಿಸುತ್ತಿದ್ದರೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ 6ಗಂಟೆಯ ಶಿಫ್ಟ್‌ಗೆ ಆಗಮಿಸುತ್ತಿದ್ದರು. ‘‘ಗೋಪಿಚಂದ್ ಅವರು ಯಾವತ್ತೂ ಬೆಳಗ್ಗೆ 4:15ಕ್ಕೆ ಎಲ್ಲರಿಗಿಂತಲೂ ಮೊದಲು ಕೋರ್ಟ್‌ನಲ್ಲಿರುತ್ತಾರೆ ಹಾಗೂ ತಮ್ಮ ಕೊನೆಯ ವಿದ್ಯಾರ್ಥಿ ಸಂಜೆ ಅಲ್ಲಿಂದ ತೆರಳುವ ತನಕ ಅಲ್ಲಿಯೇ ಇರುತ್ತಾರೆ. ಅಲ್ಲಿರುವ ಎಲ್ಲಾ 50 ತರಬೇತಿ ಪಡೆಯುವವರಿಗೂ ಸಮಾನ ಗಮನವನ್ನು ಗೋಪಿ ಸರ್ ನೀಡುತ್ತಾರೆ’’ಎಂದು ಬ್ಯಾಡ್ಮಿಂಟನ್ ಪಟು ಪರುಪಳ್ಳಿ ಕಶ್ಯಪ್ ವಿವರಿಸುತ್ತಾರೆ.
ಹೈದರಾಬಾದಿನ ಅತ್ಯಂತ ಜನನಿಬಿಡ ಗಚಿಬಾವ್ಲಿ ಪ್ರದೇಶದಲ್ಲಿರುವ ಅವರ ಈ ಅಕಾಡಮಿ ಹಲವು ಪ್ರತಿಭಾವಂತ ಆಟಗಾರರನ್ನು ಸೃಷ್ಟಿಸಿದೆ. ಸಿಂಧು ಅವರಿಗಿಂತ ಮೊದಲು ಈ ಅಕಾಡಮಿಯ ಅತ್ಯುನ್ನತ ಆಟಗಾರ್ತಿಯಾಗಿ ಹೊರ ಹೊಮ್ಮಿದವರು ಸೈನಾ ನೆಹ್ವಾಲ್. ಆದರೆ 2012 ಲಂಡನ್ ಒಲಿಂಪಿಕ್ಸ್ ಮೊದಲು ಅವರಿಬ್ಬರು ದೂರವಾಗಿದ್ದರು.
2001ರಲ್ಲಿ ತಮ್ಮ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆಲುವಿನ ನಂತರ ಹೈದರಾಬಾದ್‌ನಲ್ಲಿ ಅಕಾಡಮಿ ಸ್ಥಾಪಿಸಬೇಕೆಂಬ ಕನಸನ್ನು ಅವರು ಕಂಡಿದ್ದರು. ಹರ್ಯಾಣ ಮೂಲದ ಸೈನಾ ತನ್ನ ಹೆತ್ತವರೊಂದಿಗೆ ಗೋಪಿಚಂದ್ ಅಕಾಡಮಿಯಲ್ಲಿ ತರಬೇತಿ ಪಡೆಯಲು ತಮ್ಮ ತವರೂರಿನಿಂದ ಹೈದರಾಬಾದ್‌ಗೆ ವಲಸೆ ಬಂದಿದ್ದು ಈಗ ಇತಿಹಾಸ.
ಈಗ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆಯಾಗಿರುವ ಸಿಂಧು ಅವರು ಹೈದರಾಬಾದ್ ನಗರದ ಹಲವಾರು ಪ್ಲೈ ಓವರ್‌ಗಳನ್ನು ದಾಟಿ ದಿನಕ್ಕೆ 30 ಕಿ.ಮಿ. ಪ್ರಯಾಣಿಸಿ ಆಕಾಡಮಿಗೆ ಬಂದು ತರಬೇತಿ ಪಡೆಯುತ್ತಿದ್ದರು. ‘‘ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ನನ್ನ ತಂದೆ ನನ್ನನ್ನು ಈ ಅಕಾಡಮಿಗೆ ಬೆಳ್ಳಂಬೆಳಗ್ಗೆ ಕರೆ ತಂದು ನಂತರ ಶಾಲೆಗೆ ಬಿಟ್ಟು ಹಾಗೂ ಸಂಜೆ ಮತ್ತೆ ತರಬೇತಿಗೆ ಕರೆದುಕೊಂಡು ಬರುತ್ತಿದ್ದರು’’ಎಂದು ಸಿಂಧು ನೆನಪಿಸುತ್ತಾರೆ.
ಗೋಪಿಚಂದ್ ಅವರ ಖ್ಯಾತಿಯಿಂದಾಗಿಯೇ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೈತ ಕೆವಿಎಸ್ ಕೃಷ್ಣ ಹಾಗೂ ಅವರ ಪತ್ನಿ ರಾಧಾ ತಮ್ಮಿಬ್ಬರು ಪುತ್ರರಾದ ಶ್ರೀಕಾಂತ್ ಹಾಗೂ ನಂದಗೋಪಾಲ್ ಅವರನ್ನು ಗೋಪಿಚಂದ್ ಅಕಾಡಮಿಗೆ ಸೇರಿಸಿದ್ದರು. ಅವರಿಬ್ಬರಲ್ಲಿ ಕಿರಿಯ ಸಹೋದರನಾದ ಶ್ರೀಕಾಂತ್ ಮುಂದೆ ಭಾರತದ ಅಗ್ರ ಶ್ರೇಣಿಯ ಬ್ಯಾಡ್ಮಿಂಟನ್ ಆಟಗಾರರಾಗಿ ಹೊರಹೊಮ್ಮಿದ್ದರು.
ಗೋಪಿಚಂದ್ ಅವರ ಅಕಾಡಮಿಯಲ್ಲಿಯೇ ಉಳಿದು ತರಬೇತಿ ಹೊಂದುವ ಆಟಗಾರರು ಸಂಜೆ ಹೊತ್ತು ಹೊರ ಹೋಗುವ ಪರಿಪಾಠವಿಟ್ಟುಕೊಂಡಿಲ್ಲ. ಅದಕ್ಕೆ ಕಾರಣವೂ ಇತ್ತು ಅವರೇನಾದರೂ ತಿರುಗಾಡಿಕೊಂಡು ಬರಲು ಹೋದರೆ ಮತ್ತೆ ಬೆಳಗ್ಗಿನ ತರಬೇತಿಗೆ ಹಾಜರಾಗುವುದು ಕಷ್ಟವಾಗಿತ್ತು.
ಅವರಿಗೆ ಅಂತರ್ಜಾಲ ಸಂಪರ್ಕ ನೀಡಲಾಗುವುದಿಲ್ಲ ಹಾಗೂ ಮೊಬೈಲ್ ಫೋನುಗಳ ಮುಖಾಂತರ ಕರೆ ಮಾಡುವ ಅವಕಾಶ ಕೇವಲ ರವಿವಾರಗಳಂದು ಮಾತ್ರ ನೀಡಲಾಗುತ್ತದೆ. ಅಕಾಡಮಿಯ 16 ಕೊಠಡಿಗಳು ಹಾಗೂ ಮೂರು ಡಾರ್ಮಿಟರಿಗಳನ್ನು ಹೊರತುಪಡಿಸಿ ಅಕಾಡಮಿಯ ಎಲ್ಲಾ ಪ್ರದೇಶಗಳಲ್ಲೂ ಸಿಸಿಟಿವಿ ಕಣ್ಗಾವಲು ಇದೆ.
‘‘ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಬದ್ಧತೆ ಮತ್ತು ಶಿಸ್ತು ಅತ್ಯಗತ್ಯ. ಇಲ್ಲಿ ಯಾವುದೇ ಸುಲಭದ ಹಾದಿಯಿಲ್ಲ. ಕಷ್ಟಪಟ್ಟು ತರಬೇತಿ ಪಡೆಯುವುದು ಮುಖ್ಯವಾಗಿದೆ’’ ಎಂದು ಹೇಳುತ್ತಾರೆ ಗೋಪಿಚಂದ್.
42ರ ಹರೆಯದಲ್ಲೂ ಅವರನ್ನು ಹುರಿದುಂಬಿಸುವ ಶಕ್ತಿ ಯಾವುದು ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು. ‘‘ನನಗೆ ನಿಜವಾಗಿಯೂ ಗೊತ್ತಿಲ್ಲ. ಪ್ರತಿ ದಿನ ಇನ್ನೂ ಹೆಚ್ಚು ಸಾಧನೆ ಮಾಡಬೇಕೆಂದು ನನಗನಿಸುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರಗೀತೆ ನುಡಿಸಲಾಗುತ್ತಿದೆಯೆಂಬುದೇ ದೊಡ್ಡ ಸಂಗತಿ. ಇದಕ್ಕಿಂತಲೂ ಹೆಚ್ಚಿನ ಸ್ಫೂರ್ತಿ ಬೇರೇನೂ ಬೇಕಾಗಿಲ್ಲ’’ಎನ್ನುತ್ತಾರವರು.
ಗೋಪಿಚಂದ್ ಚಿಕ್ಕವರಿದ್ದಾಗ ಶೈಕ್ಷಣಿಕವಾಗಿ ಉನ್ನತಿ ಸಾಧಿಸಬೇಕೆಂಬ ಒತ್ತಡ ಅವರಿಗೆ ಇರಲಿಲ್ಲವೆಂದು ಅವರು ನೆನಪಿಸಿಕೊಳ್ಳುತ್ತಾರೆ. ಅವರ ತಾಯಿ ಅವರನ್ನು ಕ್ರೀಡಾ ಕ್ಷೇತದಲ್ಲಿ ಮುಂದುವರಿಯಲು ಹುರಿದುಂಬಿಸಿದ್ದರು. ಅವರ ವಯಸ್ಸಿನ ಇತರ ಹದಿಹರೆಯದವರಂತೆ ಅವರು ಕೂಡ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆದರೂ ಉತ್ತೀರ್ಣರಾಗಿರಲಿಲ್ಲ.‘‘ನಾನು ತೇರ್ಗಡೆಯಾಗುತ್ತಿದ್ದರೆ ನನ್ನ ಬದುಕಿನ ದಿಕ್ಕೇ ಬದಲಾಗುತ್ತಿತ್ತು’’ಎನ್ನುತ್ತಾರೆ ಗೋಪಿಚಂದ್. ಆಗ ಅವರಿಗೆ ರಜನೀಕಾಂತ್ ಚಿತ್ರಗಳೆಂದರೆ ಪಂಚಪ್ರಾಣವಾಗಿತ್ತು. ಅವರು ರಜನೀಕಾಂತ್ ಅವರಂತೆಯೇ ಮೀಸೆ ಕೂಡ ಇಟ್ಟುಕೊಂಡಿದ್ದರು.
1994ರಲ್ಲಿ ಡಬಲ್ಸ್ ಮ್ಯಾಚ್ ಆಡುವಾಗ ಅವರ ಮೊಣಕಾಲಿಗಾದ ಗಾಯದಿಂದಾಗಿ ಅವರು ಶಸ್ತ್ರಕ್ರಿಯೆಗೆ ಒಳಗಾಗಬೇಕಾಯಿತು ಹಾಗೂ ಸುಮಾರು ಒಂದು ವರ್ಷದ ತನಕ ನಡೆಯಲು ಅವರಿಗೆ ಅಸಾಧ್ಯವಾಗಿತ್ತು. ಮುಂದೆ ಯೋಗಾಭ್ಯಾಸದಿಂದ ಅವರು ಮತ್ತೆ ಎಂದಿನಂತೆ ನಡೆಯಲು ಶಕ್ತವಾಗಿದ್ದರು.
‘‘ನನ್ನ 27ನೆ ಹರೆಯದಲ್ಲಿ ನಾನು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆದ್ದೆ. ನಾನು ಸ್ಪರ್ಧಿಸುವುದನ್ನು ನಿಲ್ಲಿಸಿದರೂ ಕಿರಿಯ ಆಟಗಾರರಿಗೆ ಏನಾದರೂ ಮಾಡಬೇಕೆಂಬ ಹಂಬಲದಿಂದ ಈ ಅಕಾಡಮಿ ತೆರೆದೆ’’ಎಂದು ಅವರು ವಿವರಿಸುತ್ತಾರೆ.