ಸಿಂಧುಗೆ ಸರಿಯಾದ ಕೋಚ್ ಅಗತ್ಯವಿದೆ: ತೆಲಂಗಾಣ ಉಪಮುಖ್ಯಮಂತ್ರಿ
Update: 2016-08-22 23:32 IST
ಹೈದರಾಬಾದ್, ಆ.22: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ್ದ ಪಿ.ವಿ.ಸಿಂಧು ಅವರೊಂದಿಗೆ ಆಕೆಯ ಕೋಚ್ ಪುಲ್ಲೇಲ ಗೋಪಿಚಂದ್‌ರಿಗೆ ಒಂದೆಡೆ ವೀರೋಚಿತ ಸ್ವಾಗತ ನೀಡುವುದರೊಂದಿಗೆ ಇಡೀ ದೇಶ ಸಿಂಧುವಿನ ಪ್ರದರ್ಶನ ಹಾಗೂ ಗೋಪಿಚಂದ್‌ರ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದರೆ, ಮತ್ತೊಂದೆಡೆ ತೆಲಂಗಾಣದ ಉಪಮುಖ್ಯಮಂತ್ರಿ ಮುಹ್ಮಮದ್ ಮಹಮೂದ್ ಅಲಿ ವಿಭಿನ್ನ ರಾಗ ಹಾಡುತ್ತಿದ್ದಾರೆ.
‘‘ಸಿಂಧು ನಮ್ಮ ಮನೆಮಗಳು. ಆಕೆ ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಮುಂದಿನ ಬಾರಿ ಚಿನ್ನ ಗೆಲ್ಲುವಂತಾಗಲು ಆಕೆಗೆ ಸರಿಯಾದ ಕೋಚ್ ಒದಗಿಸುವ ಯೋಜನೆ ಹಾಕಿಕೊಂಡಿದ್ದೇವೆ’’ ಎಂದು ರಾಜ್ಯ ಸರಕಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಲಿ ಹೇಳಿದ್ದಾರೆ.
ಅಲಿ ಅವರ ಈ ಹೇಳಿಕೆಗೆ ಎಲ್ಲೆಡೆಯಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಕೆಲವರು ಟ್ವಿಟ್ಟರ್‌ನಲ್ಲಿ, ಇಂತಹ ಮೂರ್ಖತನದ ಹೇಳಿಕೆ ನೀಡಬೇಡಿ ಎಂದು ತಾಕೀತು ಮಾಡಿದ್ದಾರೆ.