‘‘ನೆಹರೂ, ಪಟೇಲ್‌ರನ್ನು ಗಲ್ಲಿಗೇರಿಸಲಾಗಿತ್ತು’’
ಭೋಪಾಲ್, ಆ.23: ಕೇಂದ್ರಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಇತಿಹಾಸವನ್ನೂ ಪುನರ್ ರಚಿಸಿ ಬಿಟ್ಟಿದ್ದಾರೆ. ಹೇಗಂತೀರಾ? ಮಧ್ಯ ಪ್ರದೇಶದ ಛಿಂಡ್ವಾರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಹೀಗೆಂದುಬಿಟ್ಟರು, ‘‘1857ರಲ್ಲಿ ಆರಂಭವಾದ ಸ್ವಾತಂತ್ರ ಹೋರಾಟ ನಾವು ಬ್ರಿಟಿಷರನ್ನು 90 ವರ್ಷಗಳ ನಂತರ ದೇಶದಿಂದ ಹೊರದಬ್ಬಿದಾಗ ಅಂತ್ಯವಾಯಿತು. ಗಲ್ಲಿಗೇರಿಸಲ್ಪಟ್ಟ ನೇತಾಜಿ ಸುಭಾಶ್ಚಂದ್ರ ಭೋಸ್, ಸರ್ದಾರ್ ಪಟೇಲ್, ಪಂಡಿತ್ ಜವಾಹರ ಲಾಲ್ ನೆಹರು, ಭಗತ್ ಸಿಂಗ್ ಹಾಗೂ ರಾಜಗುರು ಅವರಿಗೆ ನಮ್ಮ ಪ್ರಣಾಮಗಳು’’ ಎಂದರು.
ಮಾನವ ಸಂಪನ್ಮೂಲದಂತಹ ಪ್ರಮುಖ ಸಚಿವ ಖಾತೆ ಹೊಂದಿರುವ ಜಾವಡೇಕರ್ ಇತಿಹಾಸದ ಸತ್ಯಗಳನ್ನು ಸುಳ್ಳು ಮಾಡ ಹೊರಟಂತೆ ಕಾಣುತ್ತದೆ. ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ 1964ರಲ್ಲಿ ತಮ್ಮ 74ನೆ ವಯಸ್ಸಿನಲ್ಲಿ ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿದ್ದರು. ಸ್ವತಂತ್ರ ಭಾರತದ ಪ್ರಥಮ ಗೃಹಸಚಿವರಾಗಿದ್ದ ಪಟೇಲ್ 1950ರಲ್ಲಿ ತಮ್ಮ 75ನೆ ವಯಸ್ಸಿನಲ್ಲಿ ಮೃತಪಟ್ಟಿದ್ದರೆ, ಭೋಸ್ ಅವರ ಸಾವಿನ ಕುರಿತಾದ ವಿವಾದ ಇನ್ನೂ ಬಗೆಹರಿದಿಲ್ಲ. ತೈವಾನ್ ನಲ್ಲಿ 1945ರಲ್ಲಿ ನಡೆದ ವಿಮಾನ ದುರಂತವೊಂದರ ನಂತರ ಅವರು ಕಣ್ಮರೆಯಾಗಿದ್ದರು. ಭಗತ್ ಸಿಂಗ್ ಹಾಗೂ ರಾಜಗುರು ಮಾತ್ರ 1931ರಲ್ಲಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟಿದ್ದರು.
ಭಾರತದ 70ನೆ ಸ್ವಾತಂತ್ರ ದಿನಾಚರಣೆಯ ಸಂದರ್ಭ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಅರಿವನ್ನುಂಟು ಮಾಡಲು ಬಿಜೆಪಿಯಿಂದ ಆಯೋಜಿಸಲಾಗಿದ್ದ ತಿರಂಗ ಯಾತ್ರೆಗೆ ಚಾಲನೆ ನೀಡುವ ಸಂದರ್ಭದ ತಮ್ಮ ಭಾಷಣದಲ್ಲಿ ಸಚಿವರ ಈ ವಿವಾದಾಸ್ಪದ ಹೇಳಿಕೆ ಬಂದಿತ್ತು.