ಗುಜರಾತ್ ವಿಧಾನಸಭೆಯಲ್ಲಿ ದಲಿತ ದೌರ್ಜನ್ಯದ ಗದ್ದಲ : 50 ಕಾಂಗ್ರೆಸ್ ಶಾಸಕರ ಅಮಾನತು
ಗಾಂಧಿನಗರ, ಆ.23: ಉನಾ ದಲಿತ ದೌರ್ಜನ್ಯ ಘಟನೆಯ ಬಗ್ಗೆ ಪ್ರದರ್ಶನ ನಡೆಸಿ, ಸದನದ ಕಲಾಪಕ್ಕೆ ಭಂಗ ತಂದ ಗುಜರಾತ್ ವಿಧಾನಸಭೆಯ 50 ಮಂದಿ ಕಾಂಗ್ರೆಸ್ ಶಾಸಕರನ್ನು ಇಂದು ಮಾರ್ಶಲ್‌ಗಳಿಂದ ತೆರವುಗೊಳಿಸಿ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಉನಾದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದ ಕುರಿತು ಚರ್ಚೆಯ ವೇಳೆ, ಕಾಂಗ್ರೆಸ್ ಸದಸ್ಯರು ಸದನದ ಅಂಗಳಕ್ಕಿಳಿದರು. ಬಿಜೆಪಿ ಸರಕಾರ ದಲಿತ ವಿರೋಧಿಯೆಂಬ ಫಲಕಗಳನ್ನು ಅವರು ಪ್ರದರ್ಶಿಸಿದ ರಲ್ಲದೆ, ಆಳುವ ಪಕ್ಷದ ಸಚಿವರತ್ತ ಬಳೆಗಳನ್ನು ಎಸೆದರು.
ಕನಿಷ್ಠ 20 ಸದಸ್ಯರು ಬ್ಯಾನರ್‌ಗಳ ಉಡುಪನ್ನು ಧರಿಸಿದ್ದರು. ವಿಧಾನಸಭಾಧ್ಯಕ್ಷ ರಮಣ್‌ಲಾಲ್ ವೋರಾ ಮತ್ತೆ ಮತ್ತೆ ಎಚ್ಚರಿಕೆ ನೀಡುತ್ತಿದ್ದರೂ ಲೆಕ್ಕಿಸದೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ಮುಂದುವರಿಸಿದರು.
ಕೋಲಾಹಲ ಶಾಂತವಾಗುವ ಲಕ್ಷಣ ಕಾಣಿಸದಿದ್ದಾಗ, ಅವರನ್ನು ಸದನದಿಂದ ತೆರವುಗೊಳಿಸುವಂತೆ ಮಾರ್ಶಲ್‌ಗಳಿಗೆ ಸ್ಪೀಕರ್ ಆದೇಶಿಸಿದರು. ಬಳಿಕ ಅವರು, ಪ್ರತಿ ಶಾಸಕನ ಹೆಸರು ಕರೆದು, ಅವರನ್ನು ಒಂದು ದಿನದ ಮಟ್ಟಿಗೆ ಉಚ್ಚಾ ಟಿಸಿದರು. ಅದರಂತೆಯೇ ಕಾಂಗ್ರೆಸ್ ಶಾಸಕರನ್ನು ಸದನ ದಿಂದ ಬಲವಂತವಾಗಿ ಹೊರಗೆ ಕರೆದೊಯ್ಯಲಾಯಿತು.
ವಿಪಕ್ಷಗಳ ಸದಸ್ಯರು ದಲಿತರ ವಿಷಯದಲ್ಲಿ ಪ್ರತಿಭಟನೆ ನಡೆಸುವ ಪೂರ್ವಯೋಜಿತ ಕಾರ್ಯವ್ಯೆಹದೊಂದಿಗೆ ಬಂದಿದ್ದರು. ದಲಿತರ ಕುರಿತು ಕಾಳಜಿಗಿಂತಲೂ ಹೆಚ್ಚು, ಅದರಿಂದ ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶವಾಗಿತ್ತೆಂದು ವಿಧಾನಸಭಾಧ್ಯಕ್ಷರು ಟೀಕಿಸಿದರು.
ಕಾಂಗ್ರೆಸ್‌ನ ವಿಪಕ್ಷ ನಾಯಕ ಶಂಕರಸಿಂಹ ವೇಲಾ ಹಾಗೂ ಹಿರಿಯ ನಾಯಕ ಮೋಹನ ಸಿಂಹ ರಥ್ವಾ, ಈ ಕೋಲಾಹಲದ ವೇಳೆ ತಮ್ಮ ಆಸನಗಳಲ್ಲಿ ಕುಳಿತೇ ಇದ್ದರು. ಅವರನ್ನು ಸ್ಪೀಕರ್ ಅಮಾನತುಗೊಳಿಸಿಲ್ಲವಾದರೂ, ಬಳಿಕ ಅವರು ವೋರಾರ ಕ್ರಮವನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.