×
Ad

ದುಲೀಪ್ ಟ್ರೋಫಿ: ಹಗಲು-ರಾತ್ರಿ ಪಂದ್ಯದಲ್ಲಿ ಮೊದಲ ಬಾರಿ ಪಿಂಕ್ ಚೆಂಡು ಬಳಕೆ

Update: 2016-08-23 23:32 IST

ಹೊಸದಿಲ್ಲಿ, ಆ.23: ಭಾರತದಲ್ಲಿ ಇದೇ ಮೊದಲ ಬಾರಿ ದೇಶೀಯ ಚಾಂಪಿಯನ್‌ಶಿಪ್ ದುಲೀಪ್ ಟ್ರೋಫಿಯ ಹಗಲು-ರಾತ್ರಿ ಪಂದ್ಯದಲ್ಲಿ ಪಿಂಕ್ ಚೆಂಡನ್ನು ಬಳಸಿ ಪ್ರಯೋಗ ನಡೆಸಲಾಗಿದೆ. ಪಂದ್ಯಕ್ಕೆ ಪದೇ ಪದೇ ಫ್ಲಡ್‌ಲೈಟ್ ಕೈಕೊಟ್ಟಿದ್ದು ಟೂರ್ನಿಯ ಮೊದಲ ದಿನದಾಟದಲ್ಲಿ ಹೆಚ್ಚು ಸುದ್ದಿಯಾಯಿತು.

 ಪಿಂಕ್ ಬಾಲ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ದಿನ ವೇಗದ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದು ಒಟ್ಟು 17 ವಿಕೆಟ್‌ಗಳು ಪತನಗೊಂಡವು. ಬ್ಯಾಟ್ಸ್‌ಮನ್‌ಗಳು ಪಿಂಕ್ ಚೆಂಡನ್ನು ಎದುರಿಸಲು ಪರದಾಟ ನಡೆಸಿರುವುದು ಹೆಚ್ಚು ವಿಕೆಟ್ ಪತನಕ್ಕೆ ಕಾರಣವಾಯಿತು. ಕರೆಂಟ್ ಕೈಕೊಟ್ಟ ಕಾರಣ ಎರಡು ಬಾರಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಎರಡು ಟವರ್‌ನಲ್ಲಿ ವಿದ್ಯುತ್ ವೈಫಲ್ಯ ಕಂಡುಬಂದ ಕಾರಣ ಒಟ್ಟು 78 ನಿಮಿಷಗಳ ಪಂದ್ಯ ತೊಂದರೆಗೀಡಾಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಡಿಯಾ ರೆಡ್ ತಂಡ ಇಂಡಿಯಾ ಗ್ರೀನ್ ವಿರುದ್ಧ 48.2 ಓವರ್‌ಗಳಲ್ಲಿ 161 ರನ್‌ಗೆ ಆಲೌಟಾಯಿತು. ಸಂದೀಪ್ ಶರ್ಮ 62 ರನ್‌ಗೆ 4 ವಿಕೆಟ್ ಕಬಳಿಸಿದರು.

ಬ್ಯಾಟಿಂಗ್ ಆರಂಭಿಸಿದ ಗ್ರೀನ್ ತಂಡ ಮೊದಲ ದಿನದಾಟದಂತ್ಯಕ್ಕೆ 35 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು. ಸಿಂಗ್(3-32) ಹಾಗೂ ಕುಲ್‌ದೀಪ್ ಯಾದವ್(3-26) ತಲಾ 3 ವಿಕೆಟ್ ಪಡೆದರು.ನಾಯಕ ಸುರೇಶ್ ರೈನಾ(35) ಅಗ್ರ ಸ್ಕೋರರ್ ಎನಿಸಿಕೊಂಡರು.

ನಾಲ್ಕು ದಿನಗಳ ತ್ರಿಕೋನ ಟೂರ್ನಿ ದುಲೀಪ್ ಟ್ರೋಫಿ ಸಾಂಪ್ರದಾಯಿಕವಾಗಿ ಭಾರತೀಯ ಕ್ರಿಕೆಟ್ ಋತುವಿನ ಆರಂಭವನ್ನು ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News