"ಪಕ್ಷದಲ್ಲಿ ಹಣವಿಲ್ಲ " ಎಂಬ ಕೇಜ್ರಿವಾಲ್ ಹಾಗೂ ಚುನಾವಣಾ ಆಯೋಗ ತೋರಿಸುವ ವಾಸ್ತವ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅತಿಯಾದ ಅಬ್ಬರ ಮತ್ತು ಕಡಿಮೆ ಪ್ರಬುದ್ಧತೆ ತೋರಿಸುವ ರಾಜಕಾರಣಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಒಂದೂವರೆ ವರ್ಷಗಳ ಕಾಲ ದೆಹಲಿಯಲ್ಲಿ ಸರ್ಕಾರ ನಡೆಸಿದ ನಂತರವೂ ಗೋವಾದಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷದ ಬಳಿ ಹಣವಿಲ್ಲ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಗೋವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸದಸ್ಯರ ಜೊತೆಗೆ ಮಾತನಾಡಿದ ಕೇಜ್ರಿವಾಲ್, “ಇದು ಕೇಳಲು ವಿಚಿತ್ರವೆನಿಸುತ್ತಿದೆಯಾದರೂ, ದೆಹಲಿಯಲ್ಲಿ ಒಂದೂವರೆ ವರ್ಷಗಳ ಕಾಲ ಅಧಿಕಾರದಲ್ಲಿರುವ ಹೊರತಾಗಿಯೂ ಆಪ್ ಬಳಿ ಚುನಾವಣೆಗೆ ಸ್ಪರ್ಧಿಸಲು ಹಣವಿಲ್ಲ. ನನ್ನ ಬ್ಯಾಂಕ್ ಖಾತೆಯನ್ನು ನಿಮಗೆ ತೋರಿಸಬಲ್ಲೆ. ಪಕ್ಷದ ಬಳಿಯೂ ಹಣವಿಲ್ಲ” ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಆಪ್ ಸ್ಪರ್ಧಿಸಿದಾಗ ಜನರೇ ಚುನಾವಣೆ ಗೆಲ್ಲಿಸಿದ್ದರು. ಗೋವಾದಲ್ಲಿಯೂ ಸ್ಥಳೀಯ ಜನರೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆಪ್ ಎಲ್ಲರಿಗೂ ಉತ್ತಮ ಭವಿಷ್ಯಕ್ಕಾಗಿ ಹೋರಾಡುವ ವೇದಿಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಕೇಜ್ರಿವಾಲ್ ಹೇಳಿಕೆಗೆ ತದ್ವಿರುದ್ಧವಾಗಿ ಚುನಾವಣಾ ಆಯೋಗದ ವಿವರಗಳನ್ನು ನೋಡಿದರೆ ಅನುದಾನಗಳನ್ನು ಸ್ವೀಕರಿಸುವ ವಿಚಾರದಲ್ಲಿ ದೇಶದಲ್ಲಿಯೇ ಆಪ್ ನಾಲ್ಕನೇ ಅತೀ ದೊಡ್ಡ ಪಕ್ಷವಾಗಿದೆ. 2014-15ರಲ್ಲಿ ಪಕ್ಷವು ರೂ. 37.45 ಕೋಟಿ ಅನುದಾನವನ್ನು ಸ್ವೀಕರಿಸಿದೆ. ಆಪ್ ಗಿಂತ ಹೆಚ್ಚು ಅನುದಾನ ಸ್ವೀಕರಿಸಿದ ಇತರ ಪಕ್ಷಗಳೆಂದರೆ ಬಿಜೆಪಿ (ರೂ. 437.35 ಕೋಟಿ), ಕಾಂಗ್ರೆಸ್ (ರೂ. 141.55 ಕೋಟಿ) ಮತ್ತು ಎನ್‌ಸಿಪಿ (ರೂ. 38.82 ಕೋಟಿ).
ಇತರ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ಹೋಲಿಸಿದರೆ ಆಪ್ ಅತೀ ಹೆಚ್ಚು ಅನುದಾನ ಸ್ವೀಕರಿಸುತ್ತಿದೆ. ಉದಾಹರಣೆಗೆ, ಉತ್ತರ ಪ್ರದೇಶದಂತಹ ಅತೀ ಹೆಚ್ಚು ಜನಸಂಖ್ಯೆಯಿರುವ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷ ರೂ. 19.50 ಕೋಟಿ ಅನುದಾನಗಳನ್ನು ಸ್ವೀಕರಿಸಿದೆ. ಒಡಿಶಾದ ಬಿಜೆಡಿ (ರೂ. 21.80 ಕೋಟಿ), ಪಂಜಾಬಿನ ಶಿರೋಮಣಿ ಅಕಾಲಿ ದಳ (ರೂ. 3.01 ಕೋಟಿ), ತೆಲಂಗಾಣದ ಟಿಆರ್‌ಎಸ್ (ರೂ. 8.69 ಕೋಟಿ), ಆಂಧ್ರಪ್ರದೇಶದ ತೆಲುಗು ದೇಶಂ (ರೂ. 7.57 ಕೋಟಿ), ಪಶ್ಚಿಮ ಬಂಗಾಳದ ಟಿಎಂಸಿ (ರೂ. 8.32 ಕೋಟಿ) ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸಹಯೋಗಿ ಪಕ್ಷ ಶಿವಸೇನೆ (ರೂ. 25.58 ಕೋಟಿ) ಅನುದಾನ ಸ್ವೀಕರಿಸಿದೆ. ಇದೇ ಕಾರಣದಿಂದ ಆಪ್ ಪ್ರತಿಸ್ಪರ್ಧಿಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೇಜ್ರಿವಾಲ್ ಅವರ ಹಣವಿಲ್ಲ ಎನ್ನುವ ಹೇಳಿಕೆಯನ್ನು ಸುಳ್ಳೆಂದಿದೆ.
ಅತೀ ಬೂಟಾಟಿಕೆಯ ಹೇಳಿಕೆಯಿದು. ಇದು ಬಹಳ ಕಪಟ ಹೇಳಿಕೆಯಾಗಿದ್ದು, ಆಪ್ ಸ್ವತಃ ತನ್ನ ವರ್ಚಸ್ಸಿಗೆ ವಿರುದ್ಧವಾಗಿ ಮಾತನಾಡುತ್ತಿದೆ. ಈವರೆಗೆ ಇವರು ಇಂಡಿಯಾ ಅಗೈನ್ಸ್ಟ್ ಕರಪ್ಷನ್ (ಐಎಸಿ) ಸಂಘಟನೆ ಸಂಗ್ರಹಿಸಿದ ಅನುದಾನಗಳ ವಿವರವನ್ನು ಹೊರಗೆಡವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ. ಐಎಸಿ ಸಂಗ್ರಹಿಸಿದ ಅನುದಾನಗಳ ವಿವರಗಳನ್ನು ಹೊರಗೆಡಹುವ ತನಕ ಕೇಜ್ರಿವಾಲ್ ಹೇಳಿಕೆಗೆ ಬೆಲೆಯಿಲ್ಲ. ಆವರೆಗೂ ಆಪ್ ನ ಹಣಕಾಸು ವ್ಯವಹಾರಗಳ ವಾಸ್ತವ ಹೊರಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
“ಕೇಜ್ರಿವಾಲ್ ಯಾವಾಗಲೂ ಸುಳ್ಳಿನ ಕಂತೆ. ಅವರು ದೊಡ್ಡ ಪ್ರಮಾಣದಲ್ಲಿ ಅನುದಾನ ಸಂಗ್ರಹಿಸುವ ಉದ್ದೇಶದಿಂದ ಈ ತಂತ್ರ ಮಾಡಿದ್ದಾರೆ. ಅನುದಾನ ಸಂಗ್ರಹಿಸುವುದರಲ್ಲಿ ಅವರು ಎತ್ತಿದ ಕೈ. ದೆಹಲಿಯಲ್ಲಿ ಅವರು ಕೋಟಿಗಟ್ಟಲೆ ಸಂಗ್ರಹಿಸಿದ್ದರು. ಆದರೆ ರಾಜಧಾನಿಗೆ ಅವರೇನು ಮಾಡಿದ್ದಾರೆ? ಎಂದು ಬಿಜೆಪಿ ನಾಯಕ ವಿಜಯ್ ಜೋಲಿ ಪ್ರಶ್ನಿಸಿದ್ದಾರೆ. ದೆಹಲಿ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಿಲ್ಲ. ಜನರ ನಡುವೆ ಅವರ ವರ್ಚಸ್ಸೇ ಹಾಳಾಗಿದೆ. ಅವರು ಪ್ರತೀ ಚುನಾವಣೆಯ ಸಂದರ್ಭ ದೊಡ್ಡ ಪ್ರಮಾಣದಲ್ಲಿ ಅನುದಾನ ಸಂಗ್ರಹಿಸುತ್ತಾರೆ. ಆದರೆ ನಂತರ ಹಣವಿಲ್ಲ ಎನ್ನುತ್ತಾರೆ ಎಂದು ಆರೋಪಿಸಿರುವ ವಿಜಯ್ ಜೋಲಿ ಕೂಡ ಅಣ್ಣಾ ಹಝಾರೆ ನೇತೃತ್ವದ ಐಎಸಿ ಸಂಗ್ರಹಿಸಿದ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಶತ್ರು ಪಕ್ಷಗಳು ಕೇಜ್ರಿವಾಲ್ ಮೇಲೆ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೋವಾ ಚುನಾವಣೆಗೆ ಅನುದಾನಗಳಿಲ್ಲ ಎನ್ನುವ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವುದು ಅರವಿಂದ್ ಕೇಜ್ರಿವಾಲ್‌ಗೆ ಕಷ್ಟವಾಗಲಿದೆ.