ದೃಶ್ಯಮಾಧ್ಯಮಗಳು ಎಚ್ಚೆತ್ತುಕೊಳ್ಳಲಿ
ಮಾನ್ಯರೆ,
ಮೊನ್ನೆ ಆಗಸ್ಟ್ 20ರಂದು ದಿವಂಗತ ದೇವರಾಜ ಅರಸು ಜನ್ಮ ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಭೂಮಿ ಮತ್ತು ವಸತಿ ವಂಚಿತರ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಸುಮಾರು 10 ಸಾವಿರಕ್ಕಿಂತ ಹೆಚ್ಚಿನ ಜನರು ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಆದರೆ ಈ ಪ್ರತಿಭಟನಾ ಮೆರವಣಿಗೆ ವರದಿಯನ್ನು ಯಾವುದೇ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಲಿಲ್ಲ. ನಮ್ಮ ದೃಶ್ಯ ಮಾಧ್ಯಮಗಳು ಇಂತಹ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿವೆಯೋ ಗೊತ್ತಿಲ್ಲ.
ದಂಪತಿಯೊಂದು ಜಗಳ ಮಾಡಿಕೊಂಡರೆ, ಚಿತ್ರರಂಗದ ನಟ-ನಟಿಯರು ಮದುವೆ ನಿಶ್ಚಿತಾರ್ಥವಾದರೆ ಅದನ್ನು ದೊಡ್ಡದಾಗಿ ಸುದ್ದಿ ಪ್ರಸಾರ ಮಾಡುವ ನಮ್ಮ ದೃಶ್ಯಮಾಧ್ಯಮಗಳಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರು ಮಾಡಿದ ಬೃಹತ್ ಪ್ರತಿಭಟನಾ ಮೆರವಣಿಗೆ ತಮ್ಮ ಗಮನಕ್ಕೆ ಬಾರದೇ ಹೋಯಿತೇ?
ಹಾಗಾದರೆ ನಿಮ್ಮ ದೃಷ್ಟಿಯಲ್ಲಿ ಸುದ್ದಿಯೆಂದರೆ ಹೇಗಿರಬೇಕು? ಉತ್ತಮ ಸಮಾಜಕ್ಕಾಗಿ, ನೇರ-ದಿಟ್ಟ- ನಿರಂತರ, ಭರವಸೆಯೇ ಬೆಳಕು, ಸುದ್ದಿಯೇ ಜೀವಾಳ, ಜನ-ಮನ-ದನಿ ಎಂದು ಸಾಲು ಸಾಲು ಸಮಾಜ ಪರಿವರ್ತನೆಯ ಮಾತುಗಳನ್ನಾಡುವ ಎಲ್ಲಾ ದೃಶ್ಯ ಮಾಧ್ಯಮಗಳ ಮಿತ್ರರೆ, ಇದೇನಾ ನಿಮ್ಮ ಸಾಮಾಜಿಕ ಜವಾಬ್ದಾರಿ? ದಯವಿಟ್ಟು ಸದಾಕಾಲ ಬಡವರ ದನಿಯಾಗಿ ಅವರ ಜೊತೆ ಕೈ ಜೋಡಿಸಿ.