×
Ad

ದುಬೈ ವಿಮಾನ ನಿಲ್ದಾಣದಲ್ಲಿ ಕಳ್ಳನಾದ ಪೊಲೀಸ್!

Update: 2016-08-23 23:58 IST

ವಿಮಾನ ನಿಲ್ದಾಣದ ಪೊಲೀಸನೊಬ್ಬ ತಪಾಸಣಾ ಕೇಂದ್ರದಲ್ಲಿ ಪ್ರಯಾಣಿಕನೊಬ್ಬ ಮರೆತ ಪರ್ಸ್‌ನಿಂದ 3500 ದಿರ್ಹಂ ಕದ್ದದ್ದಕ್ಕಾಗಿ ನ್ಯಾಯಾಲಯದ ವಿಚಾರಣೆ ಎದುರಿಸಿದ್ದಾನೆ. 24 ವರ್ಷದ ಯೆಮೆನಿ ನಿವಾಸಿ ಈ ಆರೋಪವನ್ನು ಸುಳ್ಳೆಂದು ಹೇಳಿದ್ದನಾದರೂ ನಂತರ ಸಿಕ್ಕಿಬಿದ್ದ.

ಜುಲೈ 17ರಂದು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಪೊಲೀಸ್ ಹೇಳಿದ್ದಾನೆ. ನಾನು ಹ್ಯಾಂಡ್ ಬ್ಯಾಗ್ ಸ್ಕಾನರ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಾಕ್ಸಿನಲ್ಲಿ ಬಿಟ್ಟಿರುವ ಎರಡು ಪರ್ಸ್‌ಗಳನ್ನು ಕಂಡೆ. ಆಗ ಸುತ್ತಲಿದ್ದ ಪ್ರಯಾಣಿಕರಲ್ಲಿ ಅದು ಯಾರದೆಂದು ವಿಚಾರಿಸಿದೆ. ಆದರೆ ಯಾರೂ ಮುಂದೆ ಬರಲಿಲ್ಲ ಎಂದು ಪೊಲೀಸ್ ಹೇಳಿದ್ದಾನೆ. ಈ ಪರ್ಸ್‌ಗಳನ್ನು ಬದಿಗಿಟ್ಟು ನಂತರ ಕಳೆದುಹೋಗಿರುವ ಮತ್ತು ಪತ್ತೆಯಾಗಿರುವ ವಿಭಾಗಕ್ಕೆ ಕೊಡಬೇಕಾಗಿತ್ತು. ಒಂದು ಗಂಟೆಯ ಬಳಿಕ ಭಾರತೀಯ ವ್ಯಕ್ತಿಯೊಬ್ಬ ಈ ಪರ್ಸ್‌ಗಳು ತನ್ನದೆಂದು ಹೇಳಿ ಬಂದಿದ್ದ. ಅವುಗಳನ್ನು ಪರೀಕ್ಷಿಸಿ ಚಾಲನಾ ಪರವಾನಗಿ ಇರುವುದನ್ನು ಕಂಡು ಪರ್ಸ್ ಆತನ ಕೈಗಿತ್ತೆ ಎಂದು ಪೊಲೀಸ್ ಹೇಳಿದ್ದಾನೆ.

ಆದರೆ ಪರ್ಸ್ ಪಡೆದ ವ್ಯಕ್ತಿ ಅದರಿಂದ 3500 ದಿರ್ಹಂ ಕಳವಾಗಿರುವುದು ಕಂಡಿದ್ದ. ಆದರೆ ತರಾತುರಿಯಲ್ಲಿದ್ದ ವ್ಯಕ್ತಿ ಮತ್ತೆ ಬಂದು ದೂರು ದಾಖಲಿಸುವುದಾಗಿ ಹೇಳಿದ ಕಾರಣ ಪೊಲೀಸ್ ಆತನ ವಿವರಗಳನ್ನು ಬರೆದಿಟ್ಟಿದ್ದ.

ಈ ಹೇಳಿಕೆಯ ನಂತರ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಆರೋಪಿ ಪರ್ಸ್‌ನಿಂದ ಹಣ ತೆಗೆದು ತನ್ನ ಪಾಕೆಟಿನೊಳಗೆ ಇಡುವುದು ಕಂಡಿದೆ. ಈ ವಿಷಯವನ್ನು ಬೆಳಕಿಗೆ ತಂದಾಗ ಪೊಲೀಸ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪರ್ಸ್ ಯಾರದೆಂದು ತಿಳಿದುಕೊಳ್ಳಲು ಮಾಲೀಕರ ಗುರುತಿನ ಚೀಟಿ ತೆಗೆಯಲು ಪೊಲೀಸ್ ಅದನ್ನು ಬಿಡಿಸಿ ನೋಡಿದಾಗ ಹಣವನ್ನು ಕಂಡಿದ್ದ. ತಕ್ಷಣವೇ ಹಣವನ್ನು ತೆಗೆದು ಜೇಬಿಗಿಳಿಸಿದ್ದ. ನಂತರ ಏಷ್ಯನ್ ವ್ಯಕ್ತಿಯೊಬ್ಬರು ಪೊಲೀಸ್ ಅಧಿಕಾರಿಗಳ ಬಳಿ ಪರ್ಸ್ ಬಗ್ಗೆ ಕೇಳುತ್ತಿರುವುದನ್ನೂ ಕಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News