×
Ad

ಅಬ್ಬಕ್ಕ ರಾಣಿ, ಅಬ್ಬಕ್ಕ ಉತ್ಸವ ಮತ್ತು ಅಬ್ಬಕ್ಕ ಮೇಲಿನ ಬಿಜೆಪಿಯ ಅಮಿತ ಮೋಹ !

Update: 2016-08-24 09:40 IST

ಶಾಲೆಗೆ ಹೋಗುತ್ತಿದ್ದಾಗ ನಾವು ಅಬ್ಬಕ್ಕಳ ಬಗ್ಗೆ ಹಲವಾರು ಕತೆಗಳನ್ನು ಕೈ ಬದಲಿಸುತ್ತಿದ್ದೆವು. ಕೊನೆಯ ಬೆಂಚಲ್ಲಿ ಕೂರುವ ’ಪೋಕ ’ಆರಂಭಿಸಿದ ಈ ಸರಣಿ ಹೈಸ್ಕೂಲ್ ಮೆಟ್ಟಿಲೇರುವ ತನಕ ನಮಗೆ ತವಕ ಮತ್ತು ಕುತೂಹಲದ ಐಟಂ ಆಗಿತ್ತು. ’ಒನಕೆ ಓಬವ್ವ’ಳ ಕುರಿತ ಪಾಠ ಹೇಳಿದ ದಿನವಂತೂ ಪೋಕ ಓಬವ್ವ ಳಿಗಿಂತ ಅಬ್ಬಕ್ಕ ಶ್ರೇಷ್ಠಳು ಎಂದು ನನ್ನೊಳಗೆ ಚಿರಸ್ಥಾಯಿಗೊಳಿಸಿದ್ದ. ಪೋಕ ಹೇಳಿದ ಅಬ್ಬಕ್ಕ ‘ಮಸೀದಿ ಕಟ್ಟಲು ಹಣ ಕೊಟ್ಟ ವಿವರ’ ಅಬ್ಬಕ್ಕಳ ಬಗ್ಗೆ ಇನ್ನಷ್ಟು ತಿಳಿಯಲು ಆಸಕ್ತಿ ಹುಟ್ಟಿಸಿದ್ದರೂ ‘ದಿನಕರ್ ಉಳ್ಳಾಲ್’ ಅಬ್ಬಕ್ಕ ಉತ್ಸವಕ್ಕಾಗಿ ಸಮಿತಿ, ಸಭೆ ಸಜ್ಜುಗೊಳಿಸಿ ಮಾತುಕತೆ ಗೆ ಕಾವು ಕೊಟ್ಟ ಬಳಿಕವೇ ಅಬ್ಬಕ್ಕಳ ಬಗ್ಗೆ ಸಾಕಷ್ಟು ತಿಳಿಯಲು ನನಗೆ ಸಾಧ್ಯವಾದದ್ದು.!

ಆಗರ್ಭ ಶ್ರೀಮಂತಿಕೆ ಇದ್ದ ದಿನಕರ್, ಅಬ್ಬಕ್ಕ ಉತ್ಸವಕ್ಕಾಗಿ ಆರಂಭದ ದಿನಗಳಲ್ಲಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರು. ಮನೆಯ ಮದುವೆಗಾಗಿ ವ್ಯಯಿಸಿದಂತೆ ಹಣ ಖರ್ಚು ಮಾಡುತ್ತಿದ್ದರು. ಅಬ್ಬಕ್ಕ ಸಮಿತಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮಾಜಗಳ ಜಾತ್ಯತೀತ ಮನಸ್ಸುಳ್ಳವರೇ ತುಂಬಿದ್ದರು .
   ಸೇವಾ ಮನೋಭಾವದ ದಿನಕರ್ ಉಳ್ಳಾಲ್ ಆಗ ರಾಜಕೀಯದಲ್ಲಿರಲಿಲ್ಲ. ಮುಂದೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ನಗರ ಪಂಚಾಯತ್‌ನ ಉಪಾಧ್ಯಕ್ಷ, ಅಧ್ಯಕ್ಷ ನಾಗಿ ಮಿಂಚಲು, ಶಾಸಕ ಫರೀದರ ಆಪ್ತರಲ್ಲಿ ಓರ್ವರಾಗಲು ಆಬ್ಬಕ ಉತ್ಸವದ ಹಿನ್ನೆಲೆ ಕಾರಣ ಎಂದರೂ ತಪ್ಪಾಗದು.

ರಾಜಕಾರಣ, ನಗರ ಪಂಚಾಯತ್‌ನ ಉಸ್ತುವಾರಿ ಬಂದರೂ ’ಅಬ್ಬಕ್ಕ ಉತ್ಸವ’ದ ಮೇಲಿನ ದಿನಕರ್‌ರ ಹುರುಪು ಎಂದಿನಂತೆಯೇ ಇತ್ತು. ಇತ್ತೀಚಿನ ದಿನಗಳಲ್ಲಿ ಅಬ್ಬಕ್ಕ ಉತ್ಸವದಲ್ಲಿ ಜನ ಕಡಿಮೆ ಸಂಖ್ಯೆಯಲ್ಲಿ ಸೇರುತ್ತಿದ್ದರೂ ಸೇರಿದವರೂ ಕೂಡಾ ದಿನಕರ್‌ರ ಒತ್ತಾಯಕ್ಕಾಗಿ ಯಾಂತ್ರಿಕವಾಗಿ ಅಲ್ಲಿರುತ್ತಿದ್ದರೂ ದಿನಕರ್ ಉಳ್ಳಾಳ್‌ರ ಉತ್ಸಾಹ ಮಾತ್ರ ಏಕ ಪ್ರಕಾರವಾಗಿತ್ತು.

ಸರಕಾರದ ಅನುದಾನ ಬರುವ ತನಕ ದಿನಕರ್ ಉತ್ಸವಕ್ಕಾಗಿ ಮೀನಾ ಮೇಷ ನೋಡದೆ ಎಲ್ಲವನ್ನೂ ಹೊಂದಿಸಿದವರು. ಅನುದಾನ ದೊರಕಲು ದಿನಕರ್ ಸ್ಥಳೀಯ ಶಾಸಕ ಯು.ಟಿ. ಖಾದರ್‌ರ ಪ್ರಭಾವವನ್ನು ಚೆನ್ನಾಗಿ ಬಳಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದಿನಕರ್ ರಾಜಕೀಯವಾಗಿ ಖಾದರ್‌ರಿಂದ ದೂರವಾಗಿದ್ದರೂ ಅಬ್ಬಕ್ಕ ಉತ್ಸವದ ಕಾರ್ಯಕ್ರಮದ ತೊಡಗುವಿಕೆಯಲ್ಲಿ ಖಾದರ್ ಒಂದಿನಿತೂ ದೂರ ನಿಲ್ಲದೆ, ‘ಅಬ್ಬಕ್ಕ ಉತ್ಸವ ಕರ್ತವ್ಯದ ವ್ಯಾಪ್ತಿಗೆ ಸೇರಿದೆ ಎನ್ನುವಂತೆ ಈ ತನಕ ತೊಡಗಿಸಿಕೊಂಡಿದ್ದಾರೆ.

ಕಳೆದ ವರ್ಷ ನಾನು ಯು.ಟಿ. ಖಾದರ್‌ರ ಬೆಂಗಳೂರಿನ ನಿವಾಸದಲ್ಲಿ ಅವರ ನಿರೀಕ್ಷೆಯಲ್ಲಿದ್ದೆ. ಆಗ ಫೈಲೊಂದನ್ನು ಹಿಡಿದು ಅಲ್ಲಿಗೆ ಬಂದ ದಿನಕರ್ ನಮ್ಮೊಂದಿಗೆ ಸೇರಿಕೊಂಡರು. ಖಾದರ್ ಬರುವಷ್ಟರಲ್ಲಿ ಅಲ್ಲಿ ಐವತ್ತಕ್ಕಿಂತಲೂ ಹೆಚ್ಚು ಜನರು ಸೇರಿ ಆಗಿತ್ತು. ಖಾದರ್ ನಮ್ಮ ಬಳಿ ಬಂದು ಕುಶಲೋಪರಿ ವಿಚಾರಿಸಿ, ದಿನಕರ್ ನೀಡಿದ ಫೈಲ್ ಕೈಗೆ ತೆಗೆದು ಅಬ್ಬಕ್ಕ ಉತ್ಸವದ ಆನುದಾನಕ್ಕೆ ಸಂಬಂಧಿಸಿ ಅದ್ಯಾರಲ್ಲೋ ಫೋನಾಯಿಸಿ ಮಾತಾಡಿ ‘ಈಗಲೇ ಹೋಗಿ ಕಾಣಿ’ ಎಂದು ದಿನಕರ್‌ರನ್ನು ಉದ್ದೇಶಿಸಿ ಹೇಳಿದ್ದನ್ನು ಕೇಳಿ ಆವಕ್ಕಾದೆ. ಅಬ್ಬಕ್ಕಳ ಮೇಲೆ ಖಾದರ್‌ರಿಗೆ ಅನನ್ಯವಾದ ಪ್ರೀತಿ ಇದೆ ಎನ್ನುವುದು ರುಜುವಾತು ಆಯ್ತು.

ದಿನಕರ್ ಉಳ್ಳಾಲ್, ಅವರ ಸಮಿತಿ ಮತ್ತು ಯು.ಟಿ.ಖಾದರ್‌ರ ಒತ್ತಾಸೆಯ ಮೇರೆಗೆ ಯಡಿಯೂರಪ್ಪ ಮತ್ತು ಅವರ ಮಂತ್ರಿಗಳು ಒಂದೊಮ್ಮೆ ಅಬ್ಬಕ್ಕ ಉತ್ಸವದ ವೇದಿಕೆ ಏರಿರಬಹುದು. ಆದರೆ ಬಿಜೆಪಿ ಎಂದೂ ಅಬ್ಬಕ್ಕಳ ಕುರಿತು ಅಧಿಕೃತವಾಗಿ ಮಾತನಾಡಿದ ಉದಾಹರಣೆಯೇ ಸಿಗದು. ಮಾಜಿ ಶಾಸಕ, ಸಜ್ಜನ ಜಯರಾಮ್ ಶೆಟ್ಟಿ ಮಾತ್ರ ತಮ್ಮ ಶಾಸಕತ್ವದ ದಿನಗಳಿಂದಲೇ ದಿನಕರ್‌ರ ಜೊತೆ ಅಬ್ಬಕ್ಕ ಉತ್ಸವ, ಅಭಿಯಾನದ ಯಶಸ್ವಿಗೆ ಎಲ್ಲಾ ಸಂದರ್ಭಗಳಲ್ಲಿ ಯೂ ಅಹರ್ನಿಶಿ ಶ್ರಮಿಸಿದವರು. ಹೀಗಿದ್ದರೂ, ಈಗ ಏಕಾಏಕಿ ಅಬ್ಬಕ್ಕಳ ಪರಿಚಯ ಮತ್ತು ಚಿರಂತನಕ್ಕಾಗಿ ಕಾರಣರಾದವರನ್ನೆಲ್ಲಾ ಪಕ್ಕಕ್ಕಿಟ್ಟು, ತಾನೇ ಹೊಸದಾಗಿ ಪತ್ತೆ ಮಾಡಿದಂತೆ, ಇದೇ ಮೊದಲ ಬಾರಿಗೆ ಗೌರವ ಕೊಡುವಂತೆ ಭಾಸವಾಗುವ ರೀತಿಯಲ್ಲಿ ಬಿಜೆಪಿ ಅಬ್ಬಕ್ಕಳನ್ನು ತನ್ನ ಹೊಸಲಿಗೆಳೆಯುವ ಶ್ರಮ, ಐತಿಹಾಸಿಕ ವ್ಯಂಗ್ಯ. ಅಂಬೇಡ್ಕರ್, ಭಗತ್ ಸಿಂಗ್‌ರನ್ನು ’ಹೈ ಜಾಕ್ ’ ಮಾಡಿದಂತೆ ಅಬ್ಬಕ್ಕಳನ್ನೂ ಕೇಸರೀಕರಣಗೊಳಿಸುವ ಹುನ್ನಾರ ಇದಾಗಿರಬಾರದೇಕೆ?.

ತನ್ನ ಸೈನ್ಯದ ಆಯಕಟ್ಟಿನಲ್ಲಿ, ಸರಕಾರದ ಮುಖ್ಯ ಸ್ಥಾನಗಳಲ್ಲಿ ಮುಸ್ಲಿಂ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿದ, ‘ಸಾಮರಸ್ಯದ ಉಳ್ಳಾಲ’ವನ್ನು ಕಟ್ಟಿದ ಉಳ್ಳಾಲದ ‘ರಾಣಿ ಅಬ್ಬಕ್ಕ ’ಳನ್ನು ಸನ್ಮಾನಿಸಲು ಗುಜರಾತಿನಲ್ಲಿ ಮುಸ್ಲಿಮರ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರ ನಡೆಯಲು ಕಾರಣರಾದ, ನಕಲಿ ಎನ್ ಕೌಂಟರ್ ನಡೆಸಿದ ಆರೋಪವನ್ನೂ ಹೊತ್ತಿರುವ, ಚುನಾವಣೆ ಗೆದ್ದು ಕೊಳ್ಳಲು ಉತ್ತರ ಪ್ರದೇಶದ ಊರು ಕೇರಿಗಳನ್ನು ಕೋಮು ದಳ್ಳುರಿಗೆ ತಳ್ಳಿ ಮುಸ್ಲಿಮರ ಮಾರಣ ಹೋಮ ನಡೆಯಲು ನಿಮಿತ್ತರಾದ ಕೊಲೆ ಗಡುಕ ಮನಸ್ಸಿನವರೆಂದು ಆರೋಪಿಸಲ್ಪಡುವ ಅಮಿತ ಶಾ ಯಾವ ಕೋನದಿಂದ ನೋಡಿದರೂ (ಅಬ್ಬಕ್ಕಳಿಗೆ ಹಾರಾರ್ಪಣೆ ಮಾಡಲು) ಅರ್ಹರೇ ಅಲ್ಲ.!
 
 ವರ್ಷದಲ್ಲಿ ಹತ್ತು ಬಾರಿ ಕೋಮು ಜ್ವರ ಬಾಧಿಸಿಕೊಳ್ಳುವ ಉಳ್ಳಾಲಕ್ಕೆ ಅಮಿತ್ ಶಾ ಆಗಮನದ ಸುದ್ದಿ ಉಳ್ಳಾಲದ ಮುಸ್ಲಿಮರಲ್ಲಿ ಆತಂಕ ಮೂಡಿಸಿಲ್ಲ ಎಂದರೆ ಅದು ಆತ್ಮವಂಚನೆ . ಮುಸ್ಲಿಮರ ಓಟು ಬಿಜೆಪಿ ಬುಟ್ಟಿಗೆ ಗಮನಾರ್ಹ ಸಂಖ್ಯೆಯಲ್ಲಿ ಬಿದ್ದರೆ ಉಳ್ಳಾಲ ಕ್ಷೇತ್ರದಲ್ಲಿ ಜಯ ಪತಾಕೆ ಹಾರಿಸಬಹುದೆಂಬ ಸ್ಥಳೀಯ ಬಿಜೆಪಿ ಮುಖಂಡರ ಉಮೇದು, ಅಬ್ಬಕ್ಕ ಳ ನೆನಪು ಮಾಡಿದ ಮೊನ್ನೆಯ ಸಮಾರಂಭ ಮತ್ತು ಕಾರ್ಯಕ್ರಮದಲ್ಲಿ ಬಿಜೆಪಿಯ ಬಾವುಟವನ್ನು ದೂರ ಇಟ್ಟು ಕೊಂಡದ್ದು ಕೇವಲ ಗಿಮಿಕ್ ಅಷ್ಟೇ.?

ನಿಜವಾದ ಕಾಳಜಿ, ಅಬ್ಬಕ್ಕ ಪ್ರೀತಿ ಇದೆ ಎಂದಾರೆ ಅಬ್ಬಕ್ಕಳ ಅಮರತ್ವಕ್ಕಾಗಿ ಸಾಕಷ್ಟು ಶ್ರಮವನ್ನು ಧಾರೆ ಎರೆದ ದಿನಕರ್ ಉಳ್ಳಾಲ್‌ರ ಅಬ್ಬಕ್ಕ ಉತ್ಸವ ಸಮಿತಿ ಮತ್ತು ಅದರ ಪ್ರತಿಮಾತಿಗೂ ಜೀವ ತುಂಬುತ್ತಲೇ ಬಂದ ಸಚಿವ ಖಾದರ್‌ರಿಗೂ ಆದ್ಯತೆ ನೀಡಲೇಬೇಕಿತ್ತು. ಆಗ ಅದು ರಾಜಕೀಯ ಇಲ್ಲದ ಪ್ರಾಮಾಣಿಕ ನಾಡ ಸೇವೆ ಎಂದನಿಸುತ್ತಿತ್ತು.

ಏನೇ ಹೇಳಿ, ಊರ ಸಾಮರಸ್ಯ ಕೆಡದಿರಲು ತಮ್ಮೆಲ್ಲಾ ಕೋಪ ದುಗುಡಗಳನ್ನು ಒಡಲೊಳಗೆ ಬಚ್ಚಿಟ್ಟು ಏನೂ ಆಗಿಲ್ಲ ಎಂಬಂತಿದ್ದ ಉಳ್ಳಾಲದ ಮುಸ್ಲಿಮರು ನಿಜಕ್ಕೂ ಸದ್ಗಹಸ್ಥರು .

ಫಾರೂಕ್ ಉಳ್ಳಾಲ್.

Writer - ಫಾರೂಕ್ ಉಳ್ಳಾಲ್.

contributor

Editor - ಫಾರೂಕ್ ಉಳ್ಳಾಲ್.

contributor

Similar News