×
Ad

ಈತನ ಹೊಟ್ಟೆಯೊಳಗೆ ಎಷ್ಟು ಡಝನ್ ಚೂರಿಗಳಿದ್ದವು ಗೊತ್ತೆ?

Update: 2016-08-24 23:30 IST

ಉತ್ತರ ಭಾರತದಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆ ನಡೆಸಿ 40 ಚೂರಿಗಳನ್ನು ಹೊರ ತೆಗೆಯಲಾಗಿದೆ. ವ್ಯಕ್ತಿ ಈ ಚೂರಿಗಳನ್ನು ಕಳೆದ ಎರಡು ತಿಂಗಳಲ್ಲಿ ನುಂಗಿದ್ದನೆನ್ನಲಾಗಿದೆ. 43 ವರ್ಷದ ಪೊಲೀಸ್ ಕಾನ್‌ಸ್ಟೇಬಲ್ ಈಗ ಚೂರಿಗಳನ್ನು ತೆಗೆದ ಶಸ್ತ್ರಚಿಕಿತ್ಸೆಯ ನಂತರ ಪಂಜಾಬ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಕೆಲವು ಮಡಿಚಿದ ಮತ್ತು ಕೆಲವು ನೇರವಾಗಿದ್ದ 18 ಸೆಂಟಿಮೀಟರ್‌ಗಳಷ್ಟು ಉದ್ದದ ಚೂರಿಗಳನ್ನು ವ್ಯಕ್ತಿ ನುಂಗಿದ್ದ ಎಂದು ವೈದ್ಯರು ಹೇಳಿದ್ದಾರೆ. ಮಾನಸಿಕ ಸಮಸ್ಯೆಯಿಂದ ನರಳುತ್ತಿದ್ದ ರೋಗಿಗೆ ಈಗ ಕೌನ್ಸಲಿಂಗ್ ನೀಡಲಾಗುತ್ತಿದೆ.

ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ವೈದ್ಯರಾದ ಡಾ ಜಿತೇಂದ್ರ ಮಲ್ಹೋತ್ರ ಹಿಂದೆಂದೂ ಚೂರಿಗಳನ್ನು ನುಂಗುವ ರೋಗಿಯ ಬಗ್ಗೆ ಕೇಳಿರಲಿಲ್ಲ ಎಂದಿದ್ದಾರೆ. “ನನ್ನ 20 ವರ್ಷಗಳ ವೃತ್ತಿಜೀವನದಲ್ಲಿ ಮತ್ತು ನಾನು ಪರಿಶೀಲಿಸಿದ ಎಲ್ಲಾ ವೈದ್ಯಕೀಯ ಗ್ರಂಥಗಳಲ್ಲಿ ನಾನೆಂದೂ ಇಂತಹ ಪ್ರಕರಣ ನೋಡಿರಲಿಲ್ಲ. ಒಬ್ಬ ವ್ಯಕ್ತಿ ಒಂದಲ್ಲ, 40 ಚೂರಿಗಳನ್ನು ನುಂಗಿದ್ದ” ಎಂದು ಅಮೃತಸರದ ಕಾರ್ಪೋರೇಟ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವೈದ್ಯರಾಗಿರುವ ಮಲ್ಹೋತ್ರ ತಿಳಿಸಿದ್ದಾರೆ.

“ಒಂದು ಗ್ಲಾಸ್ ನೀರು ಕುಡಿದು ಚೂರಿ ನುಂಗುತ್ತಿದ್ದೆ. ಈ ಚೂರಿ ನುಂಗುವ ತುಡಿತ ವಿವರಿಸಲು ಪದಗಳಿಲ್ಲ ಎಂದು ವ್ಯಕ್ತಿ ಹೇಳಿದ್ದ. ಏಕೆ ಚೂರಿ ನುಂಗಿದ್ದಾನೆ ಎನ್ನುವುದಕ್ಕೆ ಆತನ ಬಳಿ ವಿವರಗಳಿರಲಿಲ್ಲ. ಕೇವಲ ತುಡಿತವಷ್ಟೇ ಕಾರಣ ಎಂದಿದ್ದಾನೆ” ಎನ್ನುತ್ತಾರೆ ಮಲ್ಹೋತ್ರಾ. ವ್ಯಕ್ತಿಯ ವಿವರಗಳನ್ನು ವೈದ್ಯರು ನೀಡ ಬಯಸಲಿಲ್ಲ. ಎರಡು ವಾರಗಳ ಹಿಂದೆ ಗಂಭೀರ ಹೊಟ್ಟೆನೋವೆಂದು ರೋಗಿ ಆಸ್ಪತ್ರೆ ಸೇರಿದ್ದ. “ಎಂಡೋಸ್ಕೋಪಿ ಮಾಡಿದಾಗ ಹೊಟ್ಟೆಯ ಜಾಗದಲ್ಲಿ ದೊಡ್ಡ ವಸ್ತುವಿರುವುದು ಕಂಡಿತ್ತು. ಆರಂಭದಲ್ಲಿ ನಾವು ಅದನ್ನು ಗಡ್ಡೆ ಎಂದುಕೊಂಡಿದ್ದೆವು. ಕ್ಯಾನ್ಸರ್‌ಜನಕ ಗಡ್ಡೆಗಳಿರಬಹುದು ಎಂದು ಊಹಿಸಿದ್ದೆವು. ಆದರೆ ವೈದ್ಯರು ಹಿಂದೆಂದೂ ಕೇಳದಂತಹ ಪ್ರಕರಣ ಅದಾಗಿತ್ತು” ಎನ್ನುತ್ತಾರೆ ಮಲ್ಹೋತ್ರಾ. ಇಬ್ಬರು ಸರ್ಜನ್‌ಗಳು, ಇಬ್ಬರು ತುರ್ತು ಚಿಕಿತ್ಸಾ ವೈದ್ಯರು ಮತ್ತು ಒಬ್ಬ ಅನೆಸ್ಥೆಟಿಸ್ಟ್ ಸೇರಿದ ತಂಡವು ಶಸ್ತ್ರಚಿಕಿತ್ಸೆ ನಡೆಸಿದೆ. ಆರಂಭದಲ್ಲಿ ಅವರು 28 ಚೂರಿಗಳನ್ನು ತೆಗೆದಿದ್ದರು. ಆದರೆ ಪರಿಶೀಲಿಸಿದಾಗ ಇನ್ನೂ 12 ಚೂರಿಗಳು ಸಿಕ್ಕಿದ್ದವು. ಚೂರಿಗಳ ಕಾರಣದಿಂದ ಶಸ್ತ್ರಚಿಕಿತ್ಸೆಯ ಸಂದರ್ಭ ತೀವ್ರ ರಕ್ತಸ್ರಾವವಾಗಿತ್ತು. ಕಬ್ಬಿಣದ ವಸ್ತುಗಳು ವ್ಯಕ್ತಿಯ ಹೊಟ್ಟೆಯ ಗೋಡೆಗಳನ್ನು ಸೀಳಿ ಹಾಕಿತ್ತು. ಶಸ್ತ್ರಚಿಕಿತ್ಸೆಯ ನಂತರ ಮತ್ತೊಂದು ಚೂರಿಯ ಕಡೆಗೆ ನೋಡಲೂ ಭಯವಾಗುತ್ತಿದೆ ಎಂದು ರೋಗಿ ವೈದ್ಯರಿಗೆ ಹೇಳಿದ್ದಾನೆ. “ತನಗಾಗಿ ಹಣ್ಣುಗಳನ್ನು ಕತ್ತರಿಸುತ್ತಿದ್ದ ಪತ್ನಿಗೆ ಕೋಣೆಯಿಂದ ಹೊರಗೆ ಹೋಗಿ ಆ ಕೆಲಸ ಮಾಡುವಂತೆ ಹೇಳಿದ್ದಾನೆ” ಎನ್ನುತ್ತಾರೆ ಮಲ್ಹೋತ್ರಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News